ಮತ್ತೊಮ್ಮೆ ಶೂನ್ಯ ಸಂಪಾದಿಸಿದ ಅಭಿಷೇಕ್ ಶರ್ಮಾ: ರೋಹಿತ್, ಸಂಜು ಅವರಿದ್ದ ಅನಪೇಕ್ಷಿತ ದಾಖಲೆ ಪಟ್ಟಿಗೆ ಸೇರ್ಪಡೆ

ಅಭಿಷೇಕ್ ಶರ್ಮಾ | Photo Credit : PTI
ಹೈದರಾಬಾದ್, ಎ.5: ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ತನ್ನ ಕಳಪೆ ಫಾರ್ಮ್ ಮುಂದುವರಿಸಿದ್ದು, ಮತ್ತೊಮ್ಮೆ ಶೂನ್ಯ ಸಂಪಾದಿಸಿದರು. ಈ ಮೂಲಕ ಟಿ-20 ಕ್ರಿಕೆಟಿನ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ಸೊನ್ನೆ ಸುತ್ತಿದ ಭಾರತೀಯ ಬ್ಯಾಟರ್ಗಳ ಪಟ್ಟಿಗೆ ಸೇರ್ಪಡೆಯಾದರು.
ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ರವಿವಾರ ನಡೆದ 2026ರ ಐಪಿಎಲ್ ಪಂದ್ಯದಲ್ಲಿ ಎರಡು ಎಸೆತಗಳನ್ನು ಎದುರಿಸಿದ್ದ ಅಭಿಷೇಕ್ ರನ್ ಖಾತೆ ತೆರೆಯುವ ಮೊದಲೇ ಮುಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. 2026ರಲ್ಲಿ ಟಿ-20 ಕ್ರಿಕೆಟ್ನಲ್ಲಿ ಆರನೇ ಬಾರಿ ಸೊನ್ನೆಗೆ ಔಟಾದರು. ಕ್ಯಾಲೆಂಡರ್ ವರ್ಷದಲ್ಲಿ ಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ್ದ ರೋಹಿತ್ ಶರ್ಮಾ(2018ರಲ್ಲಿ ಆರು ಸೊನ್ನೆ)ಹಾಗೂ ಸಂಜು ಸ್ಯಾಮ್ಸನ್(2024ರಲ್ಲಿ ಆರು ಸೊನ್ನೆ)ಅವರಿದ್ದ ಪಟ್ಟಿಗೆ ಸೇರಿದರು.
ಪ್ರಸಕ್ತ ಐಪಿಎಲ್ನಲ್ಲಿ ಅಭಿಷೇಕ್ ಮೂರು ಇನಿಂಗ್ಸ್ಗಳಲ್ಲಿ ಒಟ್ಟು 55 ರನ್ ಗಳಿಸಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಕೋಲ್ಕತಾ ತಂಡದ ವಿರುದ್ಧ 48 ರನ್ ಗಳಿಸಿದ್ದರು.
ಅಗ್ರ ರ್ಯಾಂಕಿನ ಟಿ-20 ಬ್ಯಾಟರ್ ಟಿ-20 ವಿಶ್ವಕಪ್ ಟೂರ್ನಿಯಲ್ಲೂ ರನ್ಗಾಗಿ ಪರದಾಡಿದ್ದರು. ಆಗ ಅವರು ಎಂಟು ಇನಿಂಗ್ಸ್ಗಳಲ್ಲಿ 17.62ರ ಸರಾಸರಿಯಲ್ಲಿ, 158ರ ಸ್ಟ್ರೈಕ್ರೇಟ್ನಲ್ಲಿ ಎರಡು ಅರ್ಧಶತಕಗಳ ಸಹಿತ ಒಟ್ಟು 141 ರನ್ ಗಳಿಸಿದ್ದರು. ಒಂದು ಅರ್ಧಶತಕವನ್ನು ಫೈನಲ್ ಪಂದ್ಯದಲ್ಲಿ ಗಳಿಸಿದ್ದರು. ವಿಶ್ವಕಪ್ ಟೂರ್ನಿಯ ಆರಂಭದಲ್ಲಿ ಸತತ ಮೂರು ಬಾರಿ ಸೊನ್ನೆಗೆ ಔಟಾಗಿದ್ದರು.
ಅಭಿಷೇಕ್ ಈ ವರ್ಷ ಒಟ್ಟಾರೆ 16 ಟಿ-20 ಇನಿಂಗ್ಸ್ಗಳಲ್ಲಿ 25.20ರ ಸರಾಸರಿಯಲ್ಲಿ 195ರ ಸ್ಟ್ರೈಕ್ರೇಟ್ನಲ್ಲಿ ನಾಲ್ಕು ಅರ್ಧಶತಕಗಳ ಸಹಿತ ಒಟ್ಟು 378 ರನ್ ಗಳಿಸಿದ್ದರು. ಇದರಲ್ಲಿ 84 ಗರಿಷ್ಠ ಸ್ಕೋರಾಗಿದೆ.






