ಭಾರತದ ಬ್ಯಾಟರ್ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

ಅಭಿಷೇಕ್ ಶರ್ಮಾ (Photo: PTI)
ಹೊಸದಿಲ್ಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮಧ್ಯೆ ಭಾರತ ತಂಡಕ್ಕೆ ಸಣ್ಣ ಆಘಾತ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್ ಹಾಗೂ ವಿಶ್ವ ನಂ.1 ಟಿ20 ಶ್ರೇಯಾಂಕಿತ ಆಟಗಾರ ಅಭಿಷೇಕ್ ಶರ್ಮಾ ಹೊಟ್ಟೆಯ ಸೋಂಕಿನಿಂದಾಗಿ ದಿಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ 25 ವರ್ಷದ ಅಭಿಷೇಕ್ ಗುರುವಾರ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಭಿಷೇಕ್ ಅವರ ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಅವರನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಲಾಗಿದೆ.
ರವಿವಾರ ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಅವರು ಫಿಟ್ ಆಗುವ ಸಾಧ್ಯತೆ ಇದೆ ಎಂಬ ಆಶಾಭಾವನೆ ತಂಡದ ಮ್ಯಾನೇಜ್ಮೆಂಟ್ ಗೆ ಇದೆ.
ರವಿವಾರ ಮುಖ್ಯ ಕೋಚ್ ಗೌತಮ್ ಗಂಭೀರ್ ನಿವಾಸದಲ್ಲಿ ನಡೆದ ತಂಡದ ಭೋಜನ ಕೂಟದಲ್ಲಿ ಅಭಿಷೇಕ್ ಭಾಗವಹಿಸಿದ್ದರು. ಆದರೆ ಉಳಿದ ಆಟಗಾರರಿಗಿಂತ ಮುಂಚಿತವಾಗಿಯೇ ಅಲ್ಲಿಂದ ನಿರ್ಗಮಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.




