ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | 52 ಎಸೆತಗಳಲ್ಲಿ 148 ರನ್ ಸಿಡಿಸಿದ ಅಭಿಶೇಕ್ ಶರ್ಮಾ

Photo Credit : Associated Press
ಹೈದರಾಬಾದ್, ನ. 30: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯವೊಂದರಲ್ಲಿ ರವಿವಾರ ಪಂಜಾಬ್ ತಂಡದಲ್ಲಿ ಆಡುತ್ತಿರುವ ಭಾರತೀಯ ತಂಡದ ಆರಂಭಿಕ ಆಟಗಾರ ಅಭಿಶೇಕ್ ಶರ್ಮಾ 52 ಎಸೆತಗಳಲ್ಲಿ 148 ರನ್ ಗಳನ್ನು ಸಿಡಿಸಿದ್ದಾರೆ.
ಅವರ ಬೃಹತ್ ಇನಿಂಗ್ಸ್ ನ ನೆರವಿನಿಂದ ಪಂಜಾಬ್ ತಂಡವು ಬಂಗಾಳದ ವಿರುದ್ಧ 20 ಓವರ್ ಗಳಲ್ಲಿ ಕೇವಲ ಐದು ವಿಕೆಟ್ ಗಳನ್ನು ಕಳೆದುಕೊಂಡು 310 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.
ಪಂದ್ಯದಲ್ಲಿ ಪಂಜಾಬ್ ಬಂಗಾಳ ತಂಡವನ್ನು 112 ರನ್ ಗಳ ಬೃಹತ್ ಅಂತರದಿಂದ ಸೋಲಿಸಿದೆ.
ಮೊದಲ ಎಸೆತದಿಂದಲೇ ಆಕ್ರಮಣಕ್ಕಿಳಿದ ಅಭಿಷೇಕ್ ಕೇವಲ 12 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದರು. ಇದು ಪುರುಷರ ಟಿ20 ಕ್ರಿಕೆಟ್ ನ ಜಂಟಿ ಮೂರನೇ ಅತಿವೇಗದ ಅರ್ಧ ಶತಕವಾಗಿದೆ ಹಾಗೂ ಭಾರತೀಯನೊಬ್ಬನ ಜಂಟಿ ಎರಡನೇ ಅತಿ ವೇಗದ ಅರ್ಧ ಶತಕವಾಗಿದೆ.
ಅವರು ಐದು ಬೌಂಡರಿಗಳು ಮತ್ತು ಐದು ಸಿಕ್ಸರ್ ಗಳನ್ನು ಸಿಡಿಸಿದರು.
ಬಳಿಕ, ಅವರು 32 ಎಸೆತಗಳಲ್ಲಿ ಶತಕ ಬಾರಿಸಿದರು. ಅದರಲ್ಲಿ 11 ಸಿಕ್ಸರ್ ಗಳು ಮತ್ತು ಏಳು ಬೌಂಡರಿಗಳಿದ್ದವು.
ಇದು ಭಾರತೀಯನೊಬ್ಬನ ಮೂರನೇ ಅತಿ ವೇಗದ ಟಿ20 ಶತಕವಾಗಿದೆ. ಭಾರತೀಯನೊಬ್ಬನ ಎರಡನೇ ಅತಿ ವೇಗದ ಟಿ20 ಶಕತದ ದಾಖಲೆಯನ್ನೂ ಅಭಿಷೇಕ್ ಈಗಾಗಲೇ ಹೊಂದಿದ್ದಾರೆ. ಅವರು 28 ಎಸೆತಗಳಲ್ಲಿ ಟಿ20 ಶತಕವನ್ನು ಇದಕ್ಕೆ ಮುನ್ನವೇ ಬಾರಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 310 ರನ್ ಗಳಿಸಿತು. ಇದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತವಾಗಿದೆ. 2024ರ ಡಿಸೆಂಬರ್ನಲ್ಲಿ, ಇಂದೋರ್ನಲ್ಲಿ ಸಿಕ್ಕಿಮ್ ವಿರುದ್ಧ ಬರೋಡ ತಂಡವು ಐದು ವಿಕೆಟ್ ಗಳ ನಷ್ಟಕ್ಕೆ 349 ರನ್ ಗಳಿಸಿತ್ತು. ಇದು ಗರಿಷ್ಠ ಮೊತ್ತವಾಗಿದೆ.
ಆರಂಭಿಕ ಆಟಗಾರ ಪ್ರಭ್ಮಾನ್ ಸಿಂಗ್ 35 ಎಸೆತಗಳಲ್ಲಿ 70 ರನ್ ಗಳನ್ನು ಸಿಡಿಸಿದರು.
ಬಳಿಕ, ಗೆಲುವಿಗೆ 311 ರನ್ ಗಳ ಗುರಿಯನ್ನು ಬೆಂಬತ್ತಿದ ಬಂಗಾಳಕ್ಕೆ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 198 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ನಾಯಕ ಅಭಿಮನ್ಯು ಈಶ್ವರನ್ 66 ಎಸೆತಗಳಲ್ಲಿ 130 ರನ್ ಗಳಿಸಿ ಅಜೇಯವಾಗಿ ಉಳಿದರು. ಆಕಾಶ್ ದೀಪ್ 31 ರನ್ ಗಳ ಕೊಡುಗೆಯನ್ನು ನೀಡಿದರು.
ಪಂಜಾಬ್ ತಂಡದ ಹರ್ಪ್ರೀತ್ ಬ್ರಾರ್ 23 ರನ್ ಗಳನ್ನು ನೀಡಿ 4 ವಿಕೆಟ್ ಗಳನ್ನು ಗಳಿಸಿದರು.







