ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅತಿ ವೇಗದ T20I ಶತಕ ಸಿಡಿಸಿದ ಅಭಿಷೇಕ್ ಶರ್ಮಾ
ರೋಹಿತ್ ಶರ್ಮಾರ 2017ರ ದಾಖಲೆ ಮುರಿದ ಅಭಿಷೇಕ್

ಅಭಿಷೇಕ್ ಶರ್ಮಾ | Photo Credit : X
ಹೊಸದಿಲ್ಲಿ: ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಮೂರನೇ T20I ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು.
ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರ ಪೈಕಿ T20I ಕ್ರಿಕೆಟ್ನಲ್ಲಿ ಇದುವರೆಗಿನ ಅತಿ ವೇಗದ ಶತಕ ಇದಾಗಿದೆ.
ಈ ಹಿಂದೆ ಭಾರತದ ರೋಹಿತ್ ಶರ್ಮಾ ಅವರು 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಅಭಿಷೇಕ್ ತಮ್ಮ ಸಹ ಆಟಗಾರನ ದಾಖಲೆಯನ್ನು ಐದು ಎಸೆತಗಳ ಅಂತರದಿಂದ ಉತ್ತಮಪಡಿಸಿದ್ದಾರೆ.
ಟೆಸ್ಟ್ ಆಡುವ ರಾಷ್ಟ್ರಗಳ ಆಟಗಾರರ ಪೈಕಿ ಈ ವರ್ಷ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಲೆಂಡ್ ನ ಫಿನ್ ಅಲೆನ್ 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 30 ಎಸೆತಗಳಲ್ಲಿ ಶತಕ ಗಳಿಸಿದ ಅಭಿಷೇಕ್, ಅಲೆನ್ ಅವರ ದಾಖಲೆಯನ್ನೂ ಮೀರಿಸಿದ್ದಾರೆ.
ಅಭಿಷೇಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ ಶತಕ ತಲುಪಲು ಅವರಿಗೆ 14 ಎಸೆತಗಳು ಮಾತ್ರ ಬೇಕಾದವು. ಶತಕ ಪೂರೈಸಿದ ಬಳಿಕ ಅವರು ಫುಟ್ ಬಾಲ್ ಆಟಗಾರ ಎರ್ಲಿಂಗ್ ಹಲ್ಯಾಂಡ್ ಅವರ ವಿಶಿಷ್ಟ ‘ಝೆನ್’ (Zen) ಶೈಲಿಯ ಸಂಭ್ರಮಾಚರಣೆ ನಡೆಸಿದರು.
ಅಂತಿಮವಾಗಿ ಅಭಿಷೇಕ್ 34 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು. ಅವರ ಇನ್ನಿಂಗ್ಸ್ ನಲ್ಲಿ ಒಂಭತ್ತು ಬೌಂಡರಿ ಹಾಗೂ ಹನ್ನೊಂದು ಸಿಕ್ಸರ್ಗಳು ಸೇರಿದ್ದವು.
►ಪುರುಷರ ಕ್ರಿಕೆಟ್ ನಲ್ಲಿ ಅತಿ ವೇಗದ T20I ಶತಕ
27 ಎಸೆತಗಳು: ಸಾಹಿಲ್ ಚೌಹಾಣ್ (ಎಸ್ಟೋನಿಯಾ) ಸೈಪ್ರಸ್ ವಿರುದ್ಧ, ಎಪಿಸ್ಕೋಪಿ, 2024
29 ಎಸೆತಗಳು: ಮುಹಮ್ಮದ್ ಫಹಾದ್ (ಟರ್ಕಿ) ಬಲ್ಗೇರಿಯಾ ವಿರುದ್ಧ, ಸೋಫಿಯಾ, 2025
30 ಎಸೆತಗಳು: ಅಭಿಷೇಕ್ ಶರ್ಮಾ (ಭಾರತ) ಅಫ್ಘಾನಿಸ್ತಾನ ವಿರುದ್ಧ, ದಿಲ್ಲಿ, 2026*
33 ಎಸೆತಗಳು: ಜಾನ್ ನಿಕೋಲ್ ಲೋಫ್ಟಿ-ಈಟನ್ (ನಮೀಬಿಯಾ) ನೇಪಾಳ ವಿರುದ್ಧ, ಕೀರ್ತಿಪುರ, 2024
33 ಎಸೆತಗಳು: ಸಿಕಂದರ್ ರಜಾ (ಝಿಂಬಾಬ್ವೆ) ಗ್ಯಾಂಬಿಯಾ ವಿರುದ್ಧ, ನೈರೋಬಿ, 2024
33 ಎಸೆತಗಳು: ಫಿನ್ ಅಲೆನ್ (ನ್ಯೂಝಿಲೆಂಡ್) ದಕ್ಷಿಣ ಆಫ್ರಿಕಾ ವಿರುದ್ಧ, ಕೋಲ್ಕತ್ತಾ, 2026
34 ಎಸೆತಗಳು: ಕುಶಲ್ ಮಲ್ಲಾ (ನೇಪಾಳ) ಮಂಗೋಲಿಯಾ ವಿರುದ್ಧ, ಹ್ಯಾಂಗ್ಝೌ, 2023
*ಅಭಿಷೇಕ್ ಶರ್ಮಾ ಅವರ 30 ಎಸೆತಗಳ ಶತಕವು ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಅತಿ ವೇಗದ T20I ಶತಕವಾಗಿದೆ.
ಸೌಜನ್ಯ: sportstar.thehindu.com






