ಎಸಿಸಿ ಕಪ್ ಟ್ರೋಫಿ ವಿವಾದ | ಐಸಿಸಿ ಸಭೆಯಲ್ಲಿ ಪ್ರಸ್ತಾವ: ಬಿಸಿಸಿಐ

Photo Credit : @BCCI
ಮುಂಬೈ, ನ. 1: ಏಶ್ಯಕಪ್ ಟ್ರೋಫಿ ಹಸ್ತಾಂತರ ವಿವಾದವನ್ನು ನವೆಂಬರ್ 4ರಂದು ದುಬೈಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ)ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಈ ವಿಷಯದ ಬಗ್ಗೆ ಬಿಸಿಸಿಐ 10 ದಿನಗಳ ಹಿಂದೆ ಏಶ್ಯನ್ ಕ್ರಿಕೆಟ್ ಮಂಡಳಿಗೆ (ಎಸಿಸಿ) ಔಪಚಾರಿಕ ಪತ್ರವೊಂದನ್ನು ಕಳುಹಿಸಿದೆ, ಆದರೆ ಅದಕ್ಕೆ ಉತ್ತರ ಬಂದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯ ತಿಳಿಸಿದರು.
‘‘ನಾವು 10 ದಿನಗಳ ಹಿಂದೆ ಎಸಿಸಿಯನ್ನು ಸಂಪರ್ಕಿಸಿ ಪತ್ರವೊಂದನ್ನು ನೀಡಿದ್ದೇವೆ. ಈವರೆಗೆ ಧನಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಾಗಾಗಿ, ದುಬೈಯಲ್ಲಿ ನವೆಂಬರ್ 4ರಂದು ಆರಂಭಗೊಳ್ಳಲಿರುವ ಐಸಿಸಿ ಸಭೆಯಲ್ಲಿ ನಾವು ಈ ವಿಷಯವನ್ನು ಪ್ರಸ್ತಾಪಿಸಲಿದ್ದೇವೆ. ಟ್ರೋಫಿ ಭಾರತಕ್ಕೆ ಬರುತ್ತದೆ ಮತ್ತು ಅದು ನಿಶ್ಚಿತ. ಯಾಕೆಂದರೆ ಈ ಟ್ರೋಫಿಯನ್ನು ಭಾರತ ಗೆದ್ದಿದೆ. ಈಗ ಅದಕ್ಕೆ ಸಮಯವನ್ನು ನಿಗದಿಪಡಿಸುವುದಷ್ಟೇ ಬಾಕಿ ಉಳಿದಿದೆ’’ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೈಕಿಯ ಹೇಳಿದರು.
ಎಸಿಸಿ ಅಧ್ಯಕ್ಷರೂ ಆಗಿರುವ ಪಾಕಿಸ್ತಾನಿ ಗೃಹ ಸಚಿವ ರಿಂದ ಟ್ರೋಫಿಯನ್ನು ತೆಗೆದುಕೊಳ್ಳದಿರುವ ಬಿಸಿಸಿಯಯ ನಿರ್ಧಾರವನ್ನು ಅವರು ಪುನರುಚ್ಚರಿಸಿದರು.
ಏಶ್ಯಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ, ಎಸಿಸಿ ಅಧ್ಯಕ್ಷ ಮುಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತಿಯ ಕ್ರಿಕೆಟ್ ತಂಡವು ನಿರಾಕರಿಸಿತ್ತು. ಆಗ ನಖ್ವಿ ಟ್ರೋಫಿಯನ್ನು ತೆಗೆದುಕೊಂಡು ಹೋಗಿ ಎಸಿಸಿ ಪ್ರಧಾನ ಕಚೇರಿಯಲ್ಲಿಟ್ಟು ಬೀಗ ಹಾಕಿದ್ದಾರೆ. ಭಾರತ ತಂಡಕ್ಕೆ ಟ್ರೋಫಿಯನ್ನು ಸಮಾರಂಭವೊಂದರಲ್ಲಿ ತಾನೇ ನೀಡಬೇಕು ಎಂದು ಅವರು ಹೇಳಿದ್ದಾರೆ.







