ಎಸಿಸಿ ಅಂಡರ್-19 ಏಶ್ಯಕಪ್ | ಭಾರತ ಫೈನಲ್ಗೆ; ಪಾಕಿಸ್ತಾನ ಎದುರಾಳಿ

Photo Credit : NDTV
ಹೊಸದಿಲ್ಲಿ: ಅಫ್ಘಾನಿಸ್ತಾನ ತಂಡದ ವಿರುದ್ಧ ಎಂಟು ವಿಕೆಟ್ಗಳಿಂದ ಸುಲಭ ಜಯ ಗಳಿಸಿದ ಭಾರತದ ಅಂಡರ್-19 ಕ್ರಿಕೆಟ್ ತಂಡವು ಪುರುಷರ ಎಸಿಸಿ ಅಂಡರ್-19 ಏಶ್ಯಕಪ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದೆ.
ಗುರುವಾರ ಒಮಾನ್ನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಗೆಲ್ಲಲು 228 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ನಾಯಕ ಲಕ್ಷ್ಯ ರಾಯ್ಚಂದಾನಿ( 93 ರನ್, 90 ಎಸೆತ, 13 ಬೌಂಡರಿ, 1 ಸಿಕ್ಸರ್)ಅರ್ಧಶತಕದ ನೆರವಿನಿಂದ ಕೇವಲ 36.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿದೆ. ಇನ್ನೂ 79 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಿದ ಭಾರತವು ಫೈನಲ್ಗೆ ತಲುಪಿದೆ. ಶನಿವಾರ ನಡೆಯಲಿರುವ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಅಫ್ಘಾನಿಸ್ತಾನ ತಂಡವು 36ನೇ ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸವಾಲಿನ ಮೊತ್ತ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ ಭಾರತದ ಬೌಲರ್ಗಳು ಮಧ್ಯಮ ಹಾಗೂ ಡೆತ್ ಓವರ್ಗಳಲ್ಲಿ ಶಿಸ್ತುಬದ್ಧ ಸ್ಪೆಲ್ ಮೂಲಕ ಪಂದ್ಯವನ್ನು ಭಾರತದತ್ತ ಸೆಳೆದರು. ಆರ್ಯನ್ ಸವ್ಸಾನಿ(2-29) ಒಂದೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಪಡೆದರು. ಅಫ್ಘಾನ್ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 227 ರನ್ ಗಳಿಸಿತು.
ಭಾರತದ ಪರ ಇಶಾನ್ ಸೂದ್(3-43)ಯಶಸ್ವಿ ಪ್ರದರ್ಶನ ನೀಡಿದರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತ ತಂಡಕ್ಕೆ ಲಕ್ಷ್ಯ ಹಾಗೂ ಆರ್ಯವೀರ್ ಸೆಹ್ವಾಗ್(51 ರನ್, 57 ಎಸೆತ, 4 ಬೌಂಡರಿ, 4 ಸಿಕ್ಸರ್) ಮೊದಲ ವಿಕೆಟ್ಗೆ 117 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಸೆಹ್ವಾಗ್ ಅರ್ಧಶತಕ ಗಳಿಸಿ ಔಟಾದರು. ವಿನೀತ್(ಔಟಾಗದೆ 57 ರನ್, 62 ಎಸೆತ, 5 ಬೌಂಡರಿ, 1 ಸಿಕ್ಸರ್)ಅವರೊಂದಿಗೆ ಕೈಜೋಡಿಸಿದ ಲಕ್ಷ್ಯ ಭಾರತವು 37ನೇ ಓವರ್ನಲ್ಲಿ ಗೆಲುವು ಪಡೆಯಲು ನೆರವಾದರು. ಲಕ್ಷ್ಯ 93 ರನ್ ಗಳಿಸಿ ಸೊಹೈಲ್ ಖಾನ್ಗೆ ವಿಕೆಟ್ ಒಪ್ಪಿಸಿ ಕೇವಲ 7 ರನ್ನಿಂದ ಶತಕ ವಂಚಿತರಾದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.






