ಎಎಫ್ಸಿ ಏಶ್ಯನ್ ಕಪ್ 2027 ಅರ್ಹತಾ ಪಂದ್ಯ : ಸಿಂಗಾಪುರ ವಿರುದ್ಧ ಡ್ರಾ ಸಾಧಿಸಿದ ಭಾರತ

Photo Credit : NDTV
ಸಿಂಗಾಪುರ, ಅ.9: ಕೊನೆಯ ಗಳಿಗೆಯಲ್ಲಿ ರಹೀಮ್ ಅಲಿ ಗಳಿಸಿದ ಗೋಲಿನ ನೆರವಿನಿಂದ 2027ರ ಆವೃತ್ತಿಯ ಎಎಫ್ಸಿ ಏಶ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಭಾರತದ ಪುರುಷರ ಫುಟ್ಬಾಲ್ ತಂಡವು ಸಿಂಗಾಪುರ ತಂಡದ ವಿರುದ್ಧ 1-1ರಿಂದ ಡ್ರಾ ಸಾಧಿಸಿದೆ.
ಗುರುವಾರ ಕಲ್ಲಾಂಗದ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸಿಂಗಾಪುರ ತಂಡದ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿರುವ ಭಾರತ ತಂಡವು ಎರಡು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. 3 ಪಂದ್ಯಗಳ ನಂತರ 5 ಅಂಕ ಗಳಿಸಿರುವ ಸಿಂಗಾಪುರ ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
‘‘ಒಂದು ಲೆಕ್ಕಾಚಾರದ ಪ್ರಕಾರ ನಮಗೆ ಇನ್ನೂ 2027ರ ಆವೃತ್ತಿಯ ಎಎಫ್ಸಿ ಏಶ್ಯನ್ ಕಪ್ಗೆ ಅರ್ಹತೆ ಪಡೆಯಲು ಅವಕಾಶವಿದೆ. ನಮಗೆ ಮೂರು ಪಂದ್ಯಗಳು ಆಡಲು ಬಾಕಿ ಇದೆ. ನಾವು ಒಂದೊಂದೇ ಪಂದ್ಯಗಳನ್ನು ಗೆಲ್ಲುತ್ತಿದ್ದೇವೆ’’ ಎಂದು ಭಾರತದ ದಾಖಲೆ ಗೋಲ್ ಸ್ಕೋರರ್ ಹಾಗೂ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ ಪಂದ್ಯದ ನಂತರ ಹೇಳಿದ್ದಾರೆ.
ಮೊದಲಾರ್ಧದ ಅಂತ್ಯಕ್ಕೆ 45ನೇ ನಿಮಿಷದಲ್ಲಿ ಇಖ್ಸಾನ್ ಫಂಡಿ ಸಿಂಗಾಪುರ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಭಾರತವು 0-1ರಿಂದ ಹಿನ್ನಡೆಯಲ್ಲಿದ್ದಾಗ 90ನೇ ನಿಮಿಷದಲ್ಲಿ ರಹೀಂ ಅಲಿ ತನ್ನ ಮೊದಲ ಅಂತರ್ರಾಷ್ಟ್ರೀಯ ಗೋಲು ಗಳಿಸಿ ಭಾರತ ತಂಡವು 1-1ರಿಂದ ಡ್ರಾ ಸಾಧಿಸಲು ನೆರವಾದರು.
ಉಭಯ ತಂಡಗಳು ಏಶ್ಯನ್ ಕಪ್ ಕ್ವಾಲಿಫೈಯರ್ಸ್ನ ಮುಂದಿನ ಸುತ್ತಿನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಭಾರತವು ಅಕ್ಟೋಬರ್ 14ರಂದು ಗೋವಾದ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಸಿಂಗಾಪುರ ವಿರುದ್ಧ ಪಂದ್ಯದ ಆತಿಥ್ಯವಹಿಸಿದೆ.







