AFC ಚಾಂಪಿಯನ್ಸ್ ಲೀಗ್ | ನೇರ ಪ್ರವೇಶದಿಂದ ವಂಚಿತವಾದ ಭಾರತ

AFC ಚಾಂಪಿಯನ್ಸ್ ಲೀಗ್
ಹೊಸದಿಲ್ಲಿ, ಜ.15: 2025-26ರ ಋತುವಿನ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಕುರಿತು ಸ್ಪಷ್ಟತೆ ಇದ್ದರೂ, ಮುಂದಿನ ವರ್ಷ ನಡೆಯಲಿರುವ ಎಎಫ್ಸಿ ಚಾಂಪಿಯನ್ಸ್ ಲೀಗ್-2ಗೆ (ಎಸಿಎಲ್2) ಭಾರತ ನೇರ ಪ್ರವೇಶ ಪಡೆಯಿಲ್ಲ ಎಂದು ಏಶ್ಯನ್ ಫುಟ್ಬಾಲ್ ಒಕ್ಕೂಟ (ಎಎಫ್ಸಿ) ಗುರುವಾರ ಪ್ರಕಟಿಸಿದೆ.
ಭಾರತವು ಏಶ್ಯದಲ್ಲಿ ಎರಡು ಸ್ಥಾನಗಳನ್ನು ಹೊಂದಿದ್ದು, ಎಸಿಎಲ್-2 ಗ್ರೂಪ್ ಹಂತಗಳಿಗೆ ಒಂದು ನೇರ ಪ್ರವೇಶ ಹಾಗೂ ಒಂದು ಪರೋಕ್ಷ ಪ್ರವೇಶ ಪಡೆಯಲಿದೆ. ಐಎಸ್ಎಲ್ ಶೀಲ್ಡ್ ವಿಜೇತ ನೇರ ಪ್ರವೇಶ ಪಡೆದರೆ, ಸೂಪರ್ ಕಪ್ ವಿಜೇತ ಪರೋಕ್ಷ ಪ್ರವೇಶ ಪಡೆದಿದ್ದಾರೆ.
ಪಂದ್ಯದ ಕನಿಷ್ಠ ಮಾನದಂಡಗಳನ್ನು ಪೂರೈಸಲು ವಿಫಲವಾದ ಹಿನ್ನೆಲೆಯಲ್ಲಿ ಭಾರತ ಎಸಿಎಲ್-2ಗೆ ಪರೋಕ್ಷ ಸ್ಥಾನ ಪಡೆಯುವ ಮೂಲಕ ವಲಯ ಕ್ವಾಲಿಫೈಯರ್ಗಳ ಮೂಲಕ ಪ್ರವೇಶಿಸಬೇಕಾಗಿದೆ.
2025-26ರ ಋತುವಿನ ಐಎಸ್ಎಲ್ ಫೆಬ್ರವರಿ 14ರಿಂದ ಆರಂಭವಾಗಲಿದೆ ಎಂದು ಖಚಿತವಾಗಿದೆ. ಎಲ್ಲಾ 14 ತಂಡಗಳು ಭಾಗವಹಿಸುವಿಕೆಯನ್ನು ದೃಢಪಡಿಸಿವೆ. ಒಟ್ಟು 91 ಪಂದ್ಯಗಳು ನಡೆಯಲಿದ್ದು, ಪ್ರತೀ ತಂಡ ಪರಸ್ಪರ ಒಂದೊಂದು ಪಂದ್ಯ (13) ಆಡಲಿದೆ.
ಫೈನಲ್ನಲ್ಲಿ ಈಸ್ಟ್ ಬಂಗಾಳ ತಂಡವನ್ನು ಮಣಿಸುವ ಮೂಲಕ ಈ ವರ್ಷ ಸೂಪರ್ ಕಪ್ ಗೆದ್ದಿರುವ ಗೋವಾ ಎಫ್ಸಿ ಈಗಾಗಲೇ ಪರೋಕ್ಷ ಸ್ಥಾನ ಪಡೆದಿದೆ.







