ಗ್ರೇಟರ್ ನೋಯ್ಡಾ | ನ್ಯೂಝಿಲ್ಯಾಂಡ್- ಅಫ್ಘಾನಿಸ್ತಾನ ಟೆಸ್ಟ್ | ತೇವಾಂಶದಿಂದಾಗಿ ಮೊದಲ ದಿನದ ಆಟ ರದ್ದು

PC : X
ಹೊಸದಿಲ್ಲಿ : ನ್ಯೂಝಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ದಿಲ್ಲಿಯ ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ಆರಂಭಗೊಂಡ ಏಕೈಕ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದ ಆಟವು ತೇವಭರಿತ ಹೊರಾಂಗಣದಿಂದಾಗಿ ಸಂಪೂರ್ಣವಾಗಿ ರದ್ದಾಗಿದೆ.
ಪಂದ್ಯದ ಅಧಿಕಾರಿಗಳು ದಿನದಲ್ಲಿ ಹಲವು ಬಾರಿ ಮೈದಾನದಲ್ಲಿ ತಪಾಸಣೆ ನಡೆಸಿದರು. ಆದರೆ, ಆಟಕ್ಕೆ ಪೂರಕವಾದ ಸ್ಥಿತಿಗತಿಗಳು ಏರ್ಪಡಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಇಲ್ಲಿ ಸೋಮವಾರ ಮಳೆ ಇರಲಿಲ್ಲವಾದರೂ, ಕಳೆದ ವಾರ ಭಾರೀ ಮಳೆ ಸುರಿದಿತ್ತು. ನೀರು ಇಂಗಿಸುವ ಆಧುನಿಕ ವ್ಯವಸ್ಥೆಯ ಅನುಪಸ್ಥಿತಿಯೂ ಪಂದ್ಯವನ್ನು ಕಾಡಿತು.
ಈ ವಾರವಿಡೀ ಗುಡುಗು ಸಹಿತ ಮಳೆ ಬೀಳುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗಾಗಿ, ಪಂದ್ಯದಲ್ಲಿ ಎಷ್ಟು ದಿನಗಳು ಆಟಕ್ಕೆ ಲಭ್ಯವಾಗಬಹುದು ಎನ್ನುವುದು ಅನಿಶ್ಚಿತವಾಗಿದೆ.
ಇದು ನ್ಯೂಝಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯವಾಗಿದೆ. ಅಫ್ಘಾನಿಸ್ತಾನಕ್ಕೆ 2017ರಲ್ಲಿ ಟೆಸ್ಟ್ ಸ್ಥಾನಮಾನ ನೀಡಲಾಗಿತ್ತು.
ಈ ಪಂದ್ಯಕ್ಕೆ ಮುನ್ನ, ಅಫ್ಘಾನಿಸ್ತಾನ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದು 6 ಪಂದ್ಯಗಳಲ್ಲಿ ಸೋತಿದೆ ಮತ್ತು 3 ಪಂದ್ಯಗಳನ್ನು ಗೆದ್ದಿದೆ.







