ಅಫ್ಘಾನಿಸ್ತಾನ ತಂಡವನ್ನು ಇನ್ನು ಮುಂದೆ ಯಾರೂ ಹಗುರವಾಗಿ ಪರಿಗಣಿಸುವುದಿಲ್ಲ: ಮುಖ್ಯ ಕೋಚ್ ಟ್ರಾಟ್

ಜೋನಾಥನ್ ಟ್ರಾಟ್ | @Trotty/ X
ಲಾಹೋರ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಟಕಾರಿ ಗೆಲುವು ಪಡೆದು ಸ್ಪರ್ಧೆಯಲ್ಲಿ ಉಳಿದಿರುವುದಕ್ಕೆ ಸಂತುಷ್ಟರಾಗಿರುವ ತಂಡದ ಮುಖ್ಯ ಕೋಚ್ ಜೋನಾಥನ್ ಟ್ರಾಟ್, ಇನ್ನು ಮುಂದೆ ಯಾವ ಎದುರಾಳಿ ತಂಡ ಕೂಡ ನಮ್ಮನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ಇಬ್ರಾಹೀಂ ಝದ್ರಾನ್ ದಾಖಲೆಯ ಶತಕ (177 ರನ್) ಹಾಗೂ ವೇಗದ ಬೌಲರ್ ಅಝ್ಮತುಲ್ಲಾ ಉಮರ್ಝೈ ಅವರ ಐದು ವಿಕೆಟ್ ಗೊಂಚಲು ನೆರವಿನಿಂದ ಅಫ್ಘಾನಿಸ್ತಾನ ತಂಡ ಗುರುವಾರ ಇಂಗ್ಲೆಂಡ್ ತಂಡವನ್ನು 8 ರನ್ನಿಂದ ಸೋಲಿಸಿತ್ತು.
‘‘50 ಓವರ್ಗಳ ವಿಶ್ವಕಪ್ ಹಾಗೂ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಏನಾಗಿದೆಯೋ ಅದರಿಂದ ಅಫ್ಘಾನಿಸ್ತಾನ ತಂಡವನ್ನು ಯಾರೂ ಮತ್ತೊಮ್ಮೆ ಹಗುರವಾಗಿ ಪರಿಗಣಿಸುವುದಿಲ್ಲ’’ಎಂದು ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ನಂತರ ಟ್ರಾಟ್ ಹೇಳಿದ್ದಾರೆ.
‘‘ನಾನು ಕೋಚ್ ಆದ ನಂತರ ಆಸ್ಟ್ರೇಲಿಯದ ವಿರುದ್ಧ ಅಫ್ಘಾನಿಸ್ತಾನ ತಂಡವು ಮೂರು ಪಂದ್ಯಗಳನ್ನು ಆಡಿದ್ದು, ಅದರಿಂದ ನಾವು ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದಿದ್ದೇವೆ. ನಾವು ಆಡಿರುವ ಪ್ರತಿ ಪಂದ್ಯವೂ ಸ್ಪರ್ಧಾತ್ಮಕವಾಗಿದೆ. ನಾವು ಪ್ರತಿ ಪಂದ್ಯವನ್ನೂ ಗೆಲ್ಲಲು ಪ್ರಯತ್ನಿಸಿದ್ದೇವೆ. ಆಸ್ಟ್ರೇಲಿಯ ತಂಡ ಕೂಡ ನಮ್ಮನ್ನು ಹಗುರವಾಗಿ ಪರಿಗಣಿಸುವಂತಿಲ್ಲ’’ಎಂದು ಮಾಜಿ ಇಂಗ್ಲೆಂಡ್ ಆಟಗಾರ ಹೇಳಿದ್ದಾರೆ.







