ಮೊದಲ ಟೆಸ್ಟ್: ಕೋಲ್ಕತಾಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ

Photo Credit : NDTV
ಹೊಸದಿಲ್ಲಿ, ನ.10: ಆತಿಥೇಯ ಭಾರತ ಕ್ರಿಕೆಟ್ ತಂಡದ ವಿರುದ್ಧ ಶುಕ್ರವಾರ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಅವರು ತನ್ನ ತಂಡವನ್ನು ಸೋಮವಾರ ಸೇರಿಕೊಂಡರು.
ಮುಖ್ಯ ಕೋಚ್ ಶುಕ್ರಿ ಕೊನ್ರಾಡ್ ಹಾಗೂ ವೇಗಿಗಳಾದ ಕಾಗಿಸೊ ರಬಾಡ ಹಾಗೂ ಮಾರ್ಕೊ ಜಾನ್ಸನ್ ಸಹಿತ ತಂಡದ ಪ್ರಮುಖ ಸದಸ್ಯರು ರವಿವಾರವೇ ಕೋಲ್ಕತಾಕ್ಕೆ ತಲುಪಿದ್ದು, ಬೆಂಗಳೂರಿನಲ್ಲಿ ನಡೆದಿದ್ದ ‘ಎ’ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದ ಬವುಮಾ ಅವರು ಇಂದು ತನ್ನ ತಂಡವನ್ನು ಸೇರ್ಪಡೆಯಾದರು.
‘‘ಬವುಮಾ ಅವರು ಇನ್ನೋರ್ವ ಆಟಗಾರ ಹಾಗೂ ಕೆಲವು ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ಇಂದು ಬೆಳಗ್ಗೆ ಆಗಮಿಸಿದರು. ಮುಖ್ಯ ಕೋಚ್ ಸಹಿತ ತಂಡದ ಬಹುತೇಕ ಸದಸ್ಯರು ರವಿವಾರವೇ ಆಗಮಿಸಿದ್ದಾರೆ. ಇಂದು ಈಡನ್ ನಲ್ಲಿ ಯಾವುದೇ ಚಟುವಟಿಕೆಗಳಿರುವುದಿಲ್ಲ, ಮಂಗಳವಾರ ಉಭಯ ತಂಡಗಳು ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ’’ಎಂದು ದಕ್ಷಿಣ ಆಫ್ರಿಕಾ ತಂಡದ ಸ್ಥಳೀಯ ಮ್ಯಾನೇಜರ್ ಪಿಟಿಐಗೆ ತಿಳಿಸಿದರು.
ಗಾಯದ ಸಮಸ್ಯೆಯಿಂದಾಗಿ ಪಾಕಿಸ್ತಾನದಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳಿಂದ ಬವುಮಾ ವಂಚಿತರಾಗಿದ್ದರು. ಬೆಂಗಳೂರಿನಲ್ಲಿ ‘ಎ’ ತಂಡದ ಪರ ಆಡುವ ಮೂಲಕ ಕ್ರಿಕೆಟಿಗೆ ವಾಪಸಾಗಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಬವುಮಾ ಅವರು 2ನೇ ಇನಿಂಗ್ಸ್ ನಲ್ಲಿ 101 ಎಸೆತಗಳಲ್ಲಿ 59 ರನ್ ಗಳಿಸಿದ್ದರು. ಈ ಮೂಲಕ ತನ್ನ ತಂಡವು 2ನೇ ಪಂದ್ಯವನ್ನು 5 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗುವಲ್ಲಿ ನೆರವಾಗಿದ್ದರು.
ಬೆಂಗಳೂರಿನಲ್ಲಿ ‘ಎ’ ತಂಡದ ಪರ ಎರಡೂ ಪಂದ್ಯಗಳಲ್ಲಿ ಆಡಿದ ನಂತರ ಮಧ್ಯಮ ಸರದಿಯ ಬ್ಯಾಟರ್ ಝುಬೆರ್ ಹಂಝಾ ಅವರು ಕೋಲ್ಕತಾಕ್ಕೆ ಆಗಮಿಸಿದ್ದಾರೆ. ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡಬಲ್ಲ ಹಂಝಾ ಕೊನೆಯ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ನಿರ್ಣಾಯಕ 77 ರನ್ ಸಹಿತ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಆಸ್ಟ್ರೇಲಿಯಕ್ಕೆ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನಾಡಲು ತೆರಳಿದ್ದ ಭಾರತೀಯ ತಂಡದಲ್ಲಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ನಾಯಕ ಶುಭಮನ್ ಗಿಲ್, ಜಸ್ಪ್ರಿತ್ ಬುಮ್ರಾ, ವಾಶಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ರವಿವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ.







