ಆಫ್ರಿಕ ನೇಶನ್ಸ್ ಕಪ್ ಫೈನಲ್ ಪಂದ್ಯದ ವಿವಾದ| ಪ್ರಶಸ್ತಿ ಸೆನೆಗಲ್ನಿಂದ ಕಿತ್ತು ಮೊರೊಕ್ಕೊಗೆ!
ಆಫ್ರಿಕನ್ ಫುಟ್ಬಾಲ್ ಕನ್ಫೆಡರೇಶನ್ ಘೋಷಣೆ

Photo Credit : PTI
ಹೊಸದಿಲ್ಲಿ, ಮಾ. 18: ಆಶ್ಚರ್ಯಕರ ವಿದ್ಯಮಾನವೊಂದರಲ್ಲಿ, ಆಫ್ರಿಕ ನೇಶನ್ಸ್ ಕಪ್ ಪ್ರಶಸ್ತಿಯನ್ನು ಸೆನೆಗಲ್ನಿಂದ ಕಸಿದುಕೊಂಡು ಮೊರೊಕ್ಕೊಗೆ ನೀಡಲಾಗಿದೆ. ಫೈನಲ್ ಪಂದ್ಯದ ವೀಡಿಯೊವನ್ನು ವೀಕ್ಷಿಸಿದ ಬಳಿಕ, ಆಫ್ರಿಕನ್ ಫುಟ್ಬಾಲ್ ಕನ್ಫೆಡರೇಶನ್ (ಸಿಎಎಫ್) ಮಂಗಳವಾರ ಈ ಘೋಷಣೆಯನ್ನು ಮಾಡಿದೆ.
ಫೈನಲ್ ಪಂದ್ಯ ನಡೆದ ಎರಡು ತಿಂಗಳುಗಳ ಬಳಿಕ ಈ ಬೆಳವಣಿಗೆ ನಡೆದಿದೆ. ರಬತ್ನಲ್ಲಿ ಜನವರಿ 18ರಂದು ನಡೆದ ಫೈನಲ್ನಲ್ಲಿ ಸೆನೆಗಲ್ ಹೆಚ್ಚುವರಿ ಸಮಯದಲ್ಲಿ ಮೊರೊಕ್ಕೊ ತಂಡವನ್ನು 1-0 ಗೋಲಿನ ಅಂತರದಿಂದ ಸೋಲಿಸಿತ್ತು. ರಾಯಲ್ ಮೊರೊಕ್ಕನ್ ಫುಟ್ಬಾಲ್ ಫೆಡರೇಶನ್ ಸಲ್ಲಿಸಿದ ಮನವಿಯನ್ನು ಎತ್ತಿಹಿಡಿದ ಕನ್ಫೆಡರೇಶನ್, ಈ ಪಂದ್ಯವನ್ನು ಸೆನೆಗಲ್ 3-0 ಅಂತರದಿಂದ ಮೊರೊಕ್ಕೊಗೆ ಒಪ್ಪಿಸಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ.
ನಿಯಮಿತ ಅವಧಿಯ ಮುಕ್ತಾಯದ ಹಂತದಲ್ಲಿ, ಪಿಚ್ನಿಂದ ಹೊರ ನಡೆಯುವ ಮೂಲಕ ಸೆನೆಗಲ್ ಆ ಪಂದ್ಯವನ್ನು ಎದುರಾಳಿಗೆ ಒಪ್ಪಿಸಿದೆ ಎಂಬುದಾಗಿ ಕನ್ಫೆಡರೇಶನ್ ಅಭಿಪ್ರಾಯಪಟ್ಟಿದೆ. ಅಫ್ಕಾನ್ ನಿಯಮಾವಳಿಗಳ 82 ಮತ್ತು 84 ವಿಧಿಗಳ ಆಧಾರದಲ್ಲಿ ಈ ತೀರ್ಪು ನೀಡಲಾಗಿದೆ. ತಂಡವೊಂದು ರೆಫರಿಯ ಅನುಮತಿಯನ್ನು ಪಡೆಯದೆ ಮೈದಾನದಿಂದ ಹೊರನಡೆದರೆ ಅದು ಪಂದ್ಯವನ್ನು 3-0 ಗೋಲಿನ ಅಂತರದಿಂದ ಸೋತಿದೆ ಎಂಬುದಾಗಿ ಈ ವಿಧಿಗಳು ಹೇಳುತ್ತವೆ.
ಈ ತೀರ್ಪಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸೆನೆಗಲ್ ಫುಟ್ಬಾಲ್, ಈ ನಿರ್ಧಾರವು, ‘‘ಹಿಂದೆಂದೂ ಕಂಡರಿಯದ ಅನ್ಯಾಯದ ಹಾಗೂ ಅಸ್ವೀಕಾರಾರ್ಹ ತೀರ್ಪಾಗಿದೆ’’ ಎಂದು ಹೇಳಿದೆ. ಈ ನಿರ್ಧಾರವನ್ನು ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದೆ. ‘‘ಸೆನೆಗಲ್ ಫುಟ್ಬಾಲ್ ಫೆಡರೇಶನ್ ಈ ನಿರ್ಧಾರವನ್ನು ಖಂಡಿಸುತ್ತದೆ. ಇದು ಆಫ್ರಿಕನ್ ಫುಟ್ಬಾಲ್ಗೆ ಅವಮಾನವಾಗಿದೆ’’ ಎಂದು ಅದು ಹೇಳಿದೆ.
ಅದೇ ವೇಳೆ, ಸರಿಯಾದ ರೀತಿಯಲ್ಲೇ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಮೊರೊಕ್ಕೊ ಹೇಳಿದೆ. ‘‘ತಾನು ಮೇಲ್ಮನವಿಯಲ್ಲಿ ಕ್ರೀಡಾ ನಿರ್ವಹಣೆಯನ್ನು ಪ್ರಶ್ನಿಸಿಲ್ಲ, ಸ್ಪರ್ಧೆಯ ವಿಧಿವಿಧಾನಗಳನ್ನು ಸರಿಯಾಗಿ ಪಾಲಿಸಬೇಕು ಎಂಬ ಮನವಿಯನ್ನಷ್ಟೇ ಮಾಡಿದ್ದೇನೆ’’ ಎಂದು ಅದು ಹೇಳಿದೆ.
ಫೈನಲ್ನಲ್ಲಿ ಏನು ನಡೆಯಿತು?
ಮೊರೊಕ್ಕೊದ ರಬತ್ನ ಪ್ರಿನ್ಸ್ ಮೌಲೇ ಅಬ್ದುಲ್ಲಾ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ನಿಗದಿತ ಅವಧಿಯ ಕೊನೆಯ ಹಂತದವರೆಗೂ ಯಾವುದೇ ಗೋಲು ದಾಖಲಾಗಿರಲಿಲ್ಲ. ನಿಲುಗಡೆ (ಸ್ಟಾಪೇಜ್) ಸಮಯದ ಕೊನೆಯ ಹಂತದಲ್ಲಿ ರೆಫರಿ ಜೀನ್-ಜಾಕ್ ಎನ್ಡಲ, ಮೊರೊಕ್ಕೊದ ಬ್ರಾಹಿಮ್ ದಿಯಾಝ್ಗೆ ಎದುರಾಳಿ ತಂಡದ ಆಟಗಾರರು ತಡೆ ಒಡ್ಡಿರುವುದಕ್ಕಾಗಿ ಆ ತಂಡಕ್ಕೆ ಪೆನಾಲ್ಟಿ ನೀಡಿದರು.
ಅದು ಘರ್ಷಣೆಗೆ ಕಾರಣವಾಯಿತು. ರೆಫರಿ ನಿರ್ಧಾರವನ್ನು ಪ್ರತಿಭಟಿಸಿ ಸೆನೆಗಲ್ ಆಟಗಾರರು ಮೈದಾನದಿಂದ ಹೊರನಡೆದರು. ಆಟವು 20 ನಿಮಿಷಗಳ ಕಾಲ ನಿಂತಿತು.
ಅಂತಿಮವಾಗಿ ಸೆನೆಗಲ್ ನಾಯಕ ಸಡಿಯೊ ಮೇನ್ ತನ್ನ ಆಟಗಾರರನ್ನು ಸಮಾಧಾನಿಸಿ ಮೈದಾನಕ್ಕೆ ಕರೆ ತಂದರು. ಆಟ ಪುನರಾರಂಭಗೊಂಡಾಗ ಪೆನಾಲ್ಟಿಯ ಲಾಭವನ್ನು ಪಡೆಯಲು ಮೊರೊಕ್ಕೊಗೆ ಸಾಧ್ಯವಾಗಲಿಲ್ಲ. ದಿಯಾಝ್ರ ಹೊಡೆತವನ್ನು ಎದುರಾಳಿ ಗೋಲ್ಕೀಪರ್ ಯಶಸ್ವಿಯಾಗಿ ತಡೆದರು.
ಆಗ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಯಿತು. ಆಗ ಸೆನೆಗಲ್ನ ಪರ ಪೇಪೆ ಗೋಯೆ ವಿಜಯಿ ಗೋಲನ್ನು ಬಾರಿಸಿದರು. ಈಗ ಆ ಫಲಿತಾಂಶವನ್ನು ಸಿಎಎಫ್ ಅಳಿಸಿಹಾಕಿದೆ.
ಅಂತರ್ರಾಷ್ಟ್ರೀಯ ತನಿಖೆಗೆ ಸೆನೆಗಲ್ ಕರೆ
ಆಫ್ರಿಕ ನೇಶನ್ಸ್ ಕಪ್ ಪ್ರಶಸ್ತಿಯನ್ನು ಸೆನೆಗಲ್ನಿಂದ ಕಸಿದುಕೊಂಡಿರುವ ವಿಷಯದ ಬಗ್ಗೆ ಅಂತರ್ರಾಷ್ಟ್ರೀಯ ತನಿಖೆಗೆ ಸೆನೆಗಲ್ ಸರಕಾರ ಬುಧವಾರ ಕರೆ ನೀಡಿದೆ. ಆಫ್ರಿಕನ್ ಫುಟ್ಬಾಲ್ ಕನ್ಫೆಡರೇಶನ್ (ಸಿಎಎಫ್)ನೊಳಗೆ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಹೇಳಿದೆ.
ಸಿಎಎಫ್ನ ತೀರ್ಪು ‘‘ಸಾರಾಸಗಟು ಕಾನೂನುಬಾಹಿರ ಮತ್ತು ಅತ್ಯಂತ ಅನ್ಯಾಯವಾಗಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ಹೇಳಿದೆ ಹಾಗೂ ಸಿಎಎಫ್ ನಾಯಕತ್ವದೊಳಗೆ ನಡೆದಿರಬಹುದಾದ ಸಂಭಾವ್ಯ ಭ್ರಷ್ಟಾಚಾರದ ಬಗ್ಗೆ ಸ್ವತಂತ್ರ ಅಂತರ್ರಾಷ್ಟ್ರೀಯ ತನಿಖೆಯಾಗಬೇಕೆಂದು ಕರೆ ನೀಡಿದೆ.






