ಮೊದಲ ಎರಡು ಸೆಟ್ ಸೋಲಿನ ಬಳಿಕ ಪ್ರತಿರೋಧ ತೋರಿದ ಅಲ್ಕರಾಝ್ ಗೆ ಫ್ರೆಂಚ್ ಓಪನ್ ಕಿರೀಟ

ಅಲ್ಕರಾಝ್ PC: x.com/paugasol
ಹೊಸದಿಲ್ಲಿ: ಮೊದಲ ಎರಡು ಸೆಟ್ ಸೋತ ಬಳಿಕ ತೀವ್ರ ಒತ್ತಡದ ನಡುವೆಯೂ ಅದ್ಭುತ ಬದ್ಧತೆ ಮತ್ತು ಮಾನಸಿಕ ದೃಢತೆ ಪ್ರದರ್ಶಿಸಿ ಪ್ರತಿ ಹೋರಾಟ ಸಂಘಟಿಸಿದ ಹಾಲಿ ಚಾಂಪಿಯಲ್ ಕಾರ್ಲೋಸ್ ಅಲ್ಕರಾಝ್ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಂಡರು.
ರವಿವಾರ ಸಂಜೆ ನಡೆದ ಸುಧೀರ್ಘ ಫೈನಲ್ ನಲ್ಲಿ ಸ್ಪೇನ್ ಆಟಗಾರ, ಎದುರಾಳಿ ಜನ್ನಿಕ್ ಸಿನ್ನರ್ ಅವರನ್ನು 4-6, 6-7(4), 6-4, 7-6 (3), 7-6 (10-2) ಸೆಟ್ ಗಳಿಂದ ಸೋಲಿಸಿದರು. ಈ ಮೂಲಕ ಟೆನಿಸ್ ಜಗತ್ತಿನ ಪ್ರತಿಭಾವಂತ ಆಟಗಾರರಲ್ಲೊಬ್ಬರು ಎನ್ನುವುದನ್ನು ಸಾಬೀತುಪಡಿಸಿದರು.
ಒಟ್ಟು 5 ಗಂಟೆ 29 ನಿಮಿಷಗಳ ಕಾಲ ನಡೆದ ಈ ಹೋರಾಟ ಫ್ರೆಂಚ್ ಓಪನ್ ಪಂದ್ಯಾವಳಿಯ ಇತಿಹಾಸದಲ್ಲೇ ಅತ್ಯಂತ ಸುಧೀರ್ಘ ಫೈನಲ್ ಎಂಬ ದಾಖಲೆ ಸೃಷ್ಟಿಸಿತು. ಆರಂಭಿಕ ಸುತ್ತುಗಳಲ್ಲಿ ಗ್ಯೂಲಿಯೊ ಝೆಪ್ಪಿರಿ ಮತ್ತು ಫ್ಯಾಬಿಯನ್ ಮರೋಝಾನ್ ಅವರಂಥ ಆಟಗಾರರನ್ನು ನೇರ ಸೆಟ್ ಗಳಲ್ಲಿ ಸದೆಬಡಿದ ಅಲ್ಕರಾಝ್ ಶ್ರೇಯಾಂಕಿತ ಆಟಗಾರರ ವಿರುದ್ಧ ಕೂಡಾ ಸುಲಭ ಜಯ ಸಾಧಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಟಾಮಿ ಪಾಲ್ ವಿರುದ್ಧ 6-0, 6-1, 6-4 ನೇರ ಸೆಟ್ ಗಳ ವಿಜಯ ಆವೆ ಅಂಕಣದಲ್ಲಿ ಅವರ ಪ್ರಾಬಲ್ಯವನ್ನು ತೋರಿಸುತ್ತದೆ.
ಸೆಮಿಫೈನಲ್ ನಲ್ಲಿ ಇಟೆಲಿಯ ಲಾರೆನ್ಸೊ ಮುಸೆಟ್ಟಿ ವಿರುದ್ಧ 4-6, 7-6, 6-0, ಮುನ್ನಡೆಯಲ್ಲಿದ್ದಾಗ ಮುಸೆಟ್ಟಿ ನಿವೃತ್ತರಾಗಿದ್ದರಿಂದ ಫೈನಲ್ ನಲ್ಲಿ ಅಗ್ರ ಶ್ರೇಯಾಂಕದ ಜೆನ್ನಿಕ್ ಸಿನ್ನರ್ ಅವರನ್ನು ಎದುರಿಸುವ ಅರ್ಹತೆಯನ್ನು ಅಲ್ಕರಾಝ್ ಪಡೆದಿದ್ದರು.
ಅದ್ಭುತ ಆರಂಭ ಪ್ರದರ್ಶಿಸಿದ ಜಿನ್ನೆರ್ ಮೊದಲ ಎರಡು ಸೆಟ್ ಗೆದ್ದು, ಚೊಚ್ಚಲ ಗ್ರ್ಯಾಂಡ್ಸ ಸ್ಲಾಂ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಅದ್ಭುತ ಮರುಹೋರಾಟ ಪ್ರದರ್ಶಿಸಿದ ಅಲ್ಕರಾಝ್, ಅಂತಿಮವಾಗಿ ನಿರ್ಣಾಯಕ ಟೈಬ್ರೇಕರ್ ನಲ್ಲಿ 10-2 ಪ್ರಾಬಲ್ಯ ಮೆರೆದರು.







