ಅಹ್ಮದಾಬಾದ್ ನಲ್ಲಿ 2026ರ ಟಿ20 ವಿಶ್ವಕಪ್ ಫೈನಲ್?

Photo Credit : PTI
ಹೊಸದಿಲ್ಲಿ, ನ.6: ಇತ್ತೀಚೆಗೆ ಮಹಿಳೆಯರ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿರುವ ಭಾರತ ತಂಡವು ಪಂದ್ಯಗಳನ್ನು ಇಂದೋರ್, ವಿಶಾಖಪಟ್ಟಣ, ಗುವಾಹಟಿ ಹಾಗೂ ನವಿ ಮುಂಬೈನಲ್ಲಿ ಆಯೋಜಿಸಿತ್ತು. ಪಾಕಿಸ್ತಾನ ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು. ಬೆಂಗಳೂರಿನಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಂಬರುವ 2026ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತದ ಪ್ರಮುಖ ನಗರಗಳಲ್ಲಿ ಆಯೋಜಿಸುವ ನಿರೀಕ್ಷೆ ಇದೆ. ಈ ಬಾರಿ ಬೆಂಗಳೂರು ನಗರದಲ್ಲಿ ಯಾವುದೇ ಪಂದ್ಯ ನಡೆಯುವ ಸಾಧ್ಯತೆಯಿಲ್ಲ. ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಬಹುದು.
ಐಸಿಸಿ ಭಾರತದಲ್ಲಿ ಐದು ತಾಣಗಳಾದ ಹೊಸದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತಾ ಹಾಗೂ ಅಹ್ಮದಾಬಾದ್ ನಲ್ಲಿ ಹಾಗೂ ಶ್ರೀಲಂಕಾದಲ್ಲಿ 2-3 ತಾಣಗಳನ್ನು ಟಿ20 ವಿಶ್ವಕಪ್ ಪಂದ್ಯಾವಳಿಯ ಆಯೋಜನಗೆ ಗುರುತಿಸಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಶ್ರೀಲಂಕಾ ಅಥವಾ ಪಾಕಿಸ್ತಾನ ಸೆಮಿ ಫೈನಲ್ ಗೆ ಅರ್ಹತೆ ಪಡೆದರೆ ಮಾತ್ರ ಕೊಲಂಬೊದಲ್ಲಿ ಸೆಮಿ ಫೈನಲ್ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್ ಗೆ ತಲುಪಿದರೆ ಫೈನಲ್ ಪಂದ್ಯವು ಕೊಲಂಬೊದಲ್ಲಿ ನಡೆಯಲಿದೆ.
ಭಾರತ ತಂಡವು 2023ರಲ್ಲಿ ಪುರುಷರ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತ್ತು. 50 ಓವರ್ ಗಳ ವಿಶ್ವಕಪ್ ಪಂದ್ಯಗಳನ್ನು ಧರ್ಮಶಾಲಾ, ಲಕ್ನೊ, ಅಹ್ಮದಾಬಾದ್, ಚೆನ್ನೈ, ದಿಲ್ಲಿ, ಪುಣೆ, ಮುಂಬೈ, ಕೋಲ್ಕತಾ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.
ಜೂನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಮೆರವಣಿಗೆಯ ನಂತರ ಸಂಭವಿಸಿದ ಕಾಲ್ತುಳಿತದ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಧಿಕಾರಿಗಳಿಂದ ಅನುಮತಿ ದೊರೆತಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯವನ್ನು ಬೆಂಗಳೂರಿನಿಂದ ನವಿ ಮುಂಬೈಗೆ ಸ್ಥಳಾಂತರಿಸಲಾಗಿತ್ತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಕುರಿತಂತೆಯೂ ಖಚಿತತೆ ಇಲ್ಲ ಎಂದು ಮೂಲಗಳು ತಿಳಿಸಿಲ್ಲ.
ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಭಾಗವಹಿಸಲಿವೆ. 20 ತಂಡಗಳು ನಾಲ್ಕು ವಿವಿಧ ಗುಂಪುಗಳಲ್ಲಿ ಸ್ಥಾನ ಪಡೆಯಲಿದ್ದು, ಪ್ರತಿಯೊಂದು ಗುಂಪು ತಲಾ 5 ತಂಡಗಳನ್ನು ಹೊಂದಿರಲಿದೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-8ಕ್ಕೆ ತೇರ್ಗಡೆಯಾಗಲಿವೆ.
ನಾಲ್ಕು ತಂಡಗಳಿರುವ ಎರಡು ಗುಂಪುಗಳು ಸೂಪರ್-8 ಸುತ್ತಿನಲ್ಲಿ ಸೆಣಸಾಡಲಿವೆ. ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್ ಗೆ ತೇರ್ಗಡೆಯಾಗಲಿವೆ.
ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಘೋಷಿಸಿಲ್ಲ. ಪಂದ್ಯಾವಳಿಯು ಫೆಬ್ರವರಿಯಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ವಿವರವಾದ ಘೋಷಣೆಯಾಗುವ ನಿರೀಕ್ಷೆ ಇದೆ.







