ಇಂಡಿಯನ್ ಸೂಪರ್ ಲೀಗ್ ಮುನ್ನ ಸೂಪರ್ ಕಪ್ : ಖಚಿತಪಡಿಸಿದ ಎಐಎಫ್‌ಎಫ್

ಹೊಸದಿಲ್ಲಿ, ಆ. 7: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ ಭವಿಷ್ಯ ಅನಿಶ್ಚಿತತೆಯಲ್ಲಿರುವುದರಿಂದ ಸೂಪರ್ ಕಪ್ ಪಂದ್ಯಾವಳಿಯನ್ನು ಹಿಂದೂಡಲು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ನಿರ್ಧರಿಸಿದೆ.
ಈಗ, ಸೂಪರ್ ಕಪ್ ಪಂದ್ಯಾವಳಿಯನ್ನು ಸೆಪ್ಟಂಬರ್-ಡಿಸೆಂಬರ್ ಅವಧಿಯಲ್ಲಿ ಏರ್ಪಡಿಸಲು ಅದು ಮುಂದಾಗಿದೆ. ಈ ಅವಧಿಯನ್ನು ಈವರೆಗೆ ಐಎಸ್‌ಎಲ್‌ನ ಆರಂಭಿಕ ಸುತ್ತಿಗೆ ಮೀಸಲಿಡಲಾಗಿತ್ತು.
ಎಐಎಫ್‌ಎಫ್ ಅಧ್ಯಕ್ಷರು ಇತ್ತೀಚೆಗೆ ಐಎಸ್‌ಎಲ್ ಕ್ಲಬ್‌ಗಳ ಮುಖ್ಯಸ್ಥರನ್ನು ಭೇಟಿಯಾಗಿ ಸೂಪರ್ ಕಪ್ ಪಂದ್ಯಾವಳಿಯ ಬಗ್ಗೆ ಚರ್ಚಿಸಿದರು. ಈ ಪಂದ್ಯಾವಳಿಯ ವಿಜೇತ ತಂಡವು ‘ಎಎಫ್‌ಸಿ ಚಾಂಪಿಯನ್ಸ್ ಲೀಗ್ 2’ ಪ್ರಾಥಮಿಕ ಸುತ್ತುಗಳಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಳ್ಳಲಿದೆ.
‘‘ಸೂಪರ್ ಕಪ್ ಪಂದ್ಯಾವಳಿಯು ಸೆಪ್ಟಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ನಡೆಯಬೇಕೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಕೆಲವು ತಂಡಗಳಿಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿ ಆಟಗಾರರನ್ನು ಕರೆದುಕೊಂಡು ಬರಲು 6-8 ವಾರಗಳು ಬೇಕಾಗಬಹುದು. ನಮ್ಮ ಮುಂದಿನ ಸಭೆಯಲ್ಲಿ, ಆರಂಭದ ದಿನಾಂಕವನ್ನು ನಾವು ಘೋಷಿಸಲಿದ್ದೇವೆ’’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ತಿಳಿಸಿದರು.





