ಏರ್ ಇಂಡಿಯಾ ವಿಮಾನ ಪತನ | ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಅನಾವರಣ ಮುಂದೂಡಿಕೆ

ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ | PC : NDTV
ಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ನೂತನ ಪ್ರಶಸ್ತಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ಅನಾವರಣವನ್ನು ಮುಂದೂಡಲಾಗಿದೆ. ಅಹ್ಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಟ್ರೋಫಿಯ ಅನಾವರಣ ಕಾರ್ಯಕ್ರಮವು ಲಾರ್ಡ್ಸ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ನೇಪಥ್ಯದಲ್ಲಿ ಶನಿವಾರ ನಡೆಯಬೇಕಾಗಿತ್ತು. ಆದರೆ, ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಗೌರವಾರ್ಥವಾಗಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.
ಕಾರ್ಯಕ್ರಮವನ್ನು ಮುಂದೂಡುವ ನಿರ್ಧಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಂಟಿಯಾಗಿ ತೆಗೆದುಕೊಂಡಿವೆ.
‘‘ಭಾರತದಲ್ಲಿ ನಡೆದಿರುವ ದುರಂತವನ್ನು ಗಮನದಲ್ಲಿಟ್ಟುಕೊಂಡು, ಸಂತ್ರಸ್ತರಿಗೆ ಗೌರವ ಸೂಚಕವಾಗಿ ಟ್ರೋಫಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ’’ ಎಂದು ಹಿರಿಯ ಇಸಿಬಿ ಅಧಿಕಾರಿಯೊಬ್ಬರು ‘ಕ್ರಿಕ್ಬಝ್’ಗೆ ತಿಳಿಸಿದರು.
ಇಂಗ್ಲೆಂಡ್ ಕ್ರಿಕೆಟಿಗ ಜೇಮ್ಸ್ ಆ್ಯಂಡರ್ಸನ್ ಮತ್ತು ಭಾರತೀಯ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರ ಹೆಸರನ್ನು ಟ್ರೋಫಿಗೆ ಇಡಲಾಗಿದೆ. ಈ ಮೊದಲು ಅಸ್ತಿತ್ವದಲ್ಲಿದ್ದ ‘ಪಟೌಡಿ ಟ್ರೋಫಿ’ಯ ಸ್ಥಾನದಲ್ಲಿ ಹೊಸ ಟ್ರೋಫಿ ಬಂದಿದೆ. 2007ರಿಂದ ಇಂಗ್ಲೆಂಡ್ನಲ್ಲಿ ನಡೆದ ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಯ ವಿಜೇತರಿಗೆ ಪಟೌಡಿ ಟ್ರೋಫಿಯನ್ನು ನೀಡಲಾಗುತ್ತಿತ್ತು.







