ಕೆಕೆಆರ್ ನಾಯಕನಾಗಿ ಅಜಿಂಕ್ಯ ರಹಾನೆ ನೇಮಕ
ವೆಂಕಟೇಶ್ ಅಯ್ಯರ್ ಉಪ ನಾಯಕ

ಅಜಿಂಕ್ಯ ರಹಾನೆ | PC : PTI
ಕೋಲ್ಕತಾ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟೂರ್ನಿಗೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡವು ಅಜಿಂಕ್ಯ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ ಅವರನ್ನು ಕ್ರಮವಾಗಿ ನಾಯಕ ಹಾಗೂ ಉಪ ನಾಯಕರನ್ನಾಗಿ ಸೋಮವಾರ ನೇಮಕ ಮಾಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಕೆಕೆಆರ್ ತಂಡವು ರಹಾನೆ ಅವರೊಂದಿಗೆ 1.5 ಕೋ.ರೂ.ಗೆ ಸಹಿ ಹಾಕಿತ್ತು. ಇದೇ ವೇಳೆ ವೆಂಕಟೇಶ್ ಅಯ್ಯರ್ 23.75 ಕೋ.ರೂ.ಗೆ ಕೆಕೆಆರ್ ತೆಕ್ಕೆಗೆ ಸೇರಿದ್ದರು. ಅಯ್ಯರ್ ಹರಾಜಿನಲ್ಲಿ 3ನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಅಜಿಂಕ್ಯ ರಹಾನೆ ಅವರು ಕಳೆದ ಋತುವಿನ ಕೆಕೆಆರ್ನ ಯಶಸ್ವಿ ನಾಯಕ ಶ್ರೇಯಸ್ ಅಯ್ಯರ್ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಅಯ್ಯರ್ರನ್ನು ಈ ಬಾರಿ ಕೆಕೆಆರ್ ತನ್ನೊಂದಿಗೆ ಉಳಿಸಿಕೊಂಡಿರಲಿಲ್ಲ. ಪಂಜಾಬ್ ಕಿಂಗ್ಸ್ ತಂಡವು ಹರಾಜಿನಲ್ಲಿ ಅಯ್ಯರ್ರನ್ನು ತನ್ನತ್ತ ಸೆಳೆದಿತ್ತ್ತು.
‘‘ಅಜಿಂಕ್ಯ ರಹಾನೆ ಅವರಂತಹವರು ನಾಯಕರಾಗಿ ತಮ್ಮ ಅನುಭವ ಹಾಗೂ ಪ್ರಬುದ್ಧತೆಯನ್ನು ತರುತ್ತಿರುವುದು ನಮಗೆ ಸಂತೋಷ ತಂದಿದೆ. ಅಲ್ಲದೆ, ವೆಂಕಟೇಶ್ ಅಯ್ಯರ್ ಅವರಲ್ಲಿ ಸಾಕಷ್ಟು ನಾಯಕತ್ವದ ಗುಣಗಳಿವೆ. ಪ್ರಶಸ್ತಿ ಉಳಿಸಿಕೊಳ್ಳುವ ನಮ್ಮ ಅಭಿಯಾನದಲ್ಲಿ ಅವರು ಒಗ್ಗಟ್ಟಿನಿಂದ ಆಡುತ್ತಾರೆ ಎಂಬ ವಿಶ್ವಾಸ ನಮಗಿದೆ’’ ಎಂದು ಕೆಕೆಆರ್ ಸಿಇಒ ವೆಂಕಿ ಮೈಸೂರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾಗಿರುವ ಕೆಕೆಆರ್ ಅನ್ನು ಮುನ್ನಡೆಸಲು ಕೇಳಿಕೊಂಡಿರುವುದು ಗೌರವದ ಸಂಗತಿ. ನಮ್ಮಲ್ಲಿ ಅತ್ಯುತ್ತಮ ಹಾಗೂ ಸಮತೋಲಿತ ತಂಡವಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲರೊಂದಿಗೆ ಕೆಲಸ ಮಾಡಲು ಹಾಗೂ ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಸ್ವೀಕರಿಸಲು ನಾನು ಎದುರು ನೋಡುತ್ತಿದ್ದೇನೆ’’ಎಂದು ರಹಾನೆ ಪ್ರತಿಕ್ರಿಯಿಸಿದರು.
ಕೆಕೆಆರ್ ಮಾ.22ರಂದು ಶನಿವಾರ ಈಡನ್ಗಾರ್ಡನ್ಸ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಮೊದಲ ಹೆಜ್ಜೆ ಇಡಲಿದೆ.
ಈ ಬಾರಿಯ ಐಪಿಎಲ್ ಟೂರ್ನಿಯು ಮಾ.22ರಂದು ಆರಂಭವಾಗಲಿದೆ.







