ಬುಮ್ರಾಗೆ ವಿರಾಮ ನೀಡಿದರೆ ಅರ್ಷದೀಪ್ಗೆ ಅವಕಾಶ ನೀಡಿ: ಅಜಿಂಕ್ಯ ರಹಾನೆ

ಬುಮ್ರಾ, ಅರ್ಷದೀಪ್ | PTI
ಹೊಸದಿಲ್ಲಿ: ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ನಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಇಂಗ್ಲೆಂಡ್ ತಂಡ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಆಡುವುದು ಅನುಮಾನ. ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಸರಣಿಯಲ್ಲಿ ಭಾರತ ತಂಡ 1-2ರಿಂದ ಹಿನ್ನಡೆಯಲ್ಲಿದ್ದು, ಬುಮ್ರಾ ಲಭ್ಯತೆಯು ನಿರ್ಣಾಯಕವಾಗಿ ಕಾಣುತ್ತಿದೆ. ಸರಣಿಗಿಂತ ಮೊದಲಿನ ಯೋಜನೆಯ ಪ್ರಕಾರ ಬುಮ್ರಾ 5 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಆಡಲಿದ್ದಾರೆ.
ಬುಮ್ರಾ ಅವರು ಲೀಡ್ಸ್ ಹಾಗೂ ಲಾರ್ಡ್ಸ್ನಲ್ಲಿ ನಡೆದಿರುವ 1ನೇ ಹಾಗೂ 3ನೇ ಟೆಸ್ಟ್ ಪಂದ್ಯವನ್ನು ಈಗಾಗಲೇ ಆಡಿದ್ದಾರೆ. 4ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾರನ್ನು ಕಣಕ್ಕಿಳಸಬೇಕೇ ಅಥವಾ ಸರಣಿಯ ಫೈನಲ್ ಪಂದ್ಯದಲ್ಲಿ ಆಡಿಸಬೇಕೇ ಎಂಬ ಕುರಿತು ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಗೊಂದಲದಲ್ಲಿದೆ.
ಒಂದು ವೇಳೆ ಬುಮ್ರಾಗೆ ವಿಶ್ರಾಂತಿ ನೀಡಿದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ರನ್ನು ಆಡಿಸಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರು ಸಲಹೆ ನೀಡಿದ್ದಾರೆ.
‘‘ ಇಂಗ್ಲೆಂಡ್ನಲ್ಲಿ ಚೆಂಡನ್ನು ಎರಡೂ ಬದಿಗಳಲ್ಲಿ ಸ್ವಿಂಗ್ ಮಾಡಬಲ್ಲ, ವಿಭಿನ್ನ ಆಯಾಮದಲ್ಲಿ ಬೌಲಿಂಗ್ ಮಾಡಬಲ್ಲ ಎಡಗೈ ವೇಗಿಗಳು ನಮಗೆ ಅಗತ್ಯವಿದೆ. ಅರ್ಷದೀಪ್ ಸ್ಪಿನ್ನರ್ಗಳಿಗೂ ಅವಕಾಶ ಸ್ಪಷ್ಟಿಸಬಲ್ಲರು. ಒಂದೊಮ್ಮೆ ಬುಮ್ರಾ ಆಡದೇ ಇದ್ದರೆ ಅರ್ಷದೀಪ್ಗೆ ಮುಂದಿನ ಪಂದ್ಯದಲ್ಲಿ ಅವಕಾಶ ನೀಡುವುದು ಉತ್ತಮ’’ ಎಂದು ತನ್ನ ಯೂ ಟ್ಯೂಬ್ ಚಾನೆಲ್ನಲ್ಲಿ ರಹಾನೆ ಹೇಳಿದ್ದಾರೆ.
ತಂಡದ ಸ್ಪಿನ್ ಆಯ್ಕೆಗಳತ್ತ ಅದರಲ್ಲೂ ವಿಶೇಷವಾಗಿ ಕುಲದೀಪ್ ಯಾದವ್ ಕುರಿತು ಮಾತನಾಡಿದ ರಹಾನೆ, ‘‘ಪಿಚ್ನ ಪರಿಸ್ಥಿತಿಯನ್ನು ಅವಲಂಭಿಸಿ, ಕುಲದೀಪ್ ಅವರನ್ನು ಆಡಿಸಬೇಕು. ಪಿಚ್ ಹಿಂದಿನ 3 ಪಂದ್ಯಗಳ ರೀತಿಯೇ ಇದ್ದಲ್ಲಿ ಕುಲದೀಪ್ರನ್ನು ಆಡಿಸಲೇಬೇಕು. ನಮ್ಮ ಬ್ಯಾಟಿಂಗ್ ವಿಭಾಗ ನಿಜವಾಗಿಯೂ ಉತ್ತಮವಾಗಿ ಆಡುತ್ತಿದೆ. 25-30 ರನ್ ಕಡಿಮೆ ಗಳಿಸಿದರೂ ಚಿಂತೆ ಇಲ್ಲ. ಆದರೆ ನಮಗೆ ವಿಕೆಟ್ ಪಡೆಯುವ ಬೌಲರ್ಗಳ ಅಗತ್ಯವಿದೆ. ಪ್ರತೀ ಬಾರಿಯೂ ಪ್ರಮುಖ ವೇಗದ ಬೌಲರ್ಗಳನ್ನು ಅವಲಂಬಿಸಲು ಸಾಧ್ಯವಿಲ್ಲ’’ಎಂದರು.
ಅರ್ಷದೀಪ್ 63 ಟಿ-20 ಪಂದ್ಯಗಳಲ್ಲಿ 99 ವಿಕೆಟ್ಗಳನ್ನು ಪಡೆದಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಲು ಕಾಯುತ್ತಿದ್ದಾರೆ. ಅಭ್ಯಾಸದ ವೇಳೆ ಎಡಗೈಗೆ ಚೆಂಡು ಬಡಿದು ಅರ್ಷದೀಪ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಅವರು ಅಡುವ ಕುರಿತು ಅನುಮಾನವಿದೆ.







