IPL-2026| ಕೆಕೆಆರ್ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ

ಅಜಿಂಕ್ಯ ರಹಾನೆ | Photo : PTI
ಹೊಸದಿಲ್ಲಿ, ಎ.15: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ವಿರುದ್ಧ ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡಿದ್ದಕ್ಕೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ನಾಯಕ ಅಜಿಂಕ್ಯ ರಹಾನೆಗೆ ಬುಧವಾರ ಪಂದ್ಯ ಶುಲ್ಕದಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಐಪಿಎಲ್ ನೀತಿ ಸಂಹಿತೆ ಆರ್ಟಿಕಲ್ 2.22ರ ಪ್ರಕಾರ ಇದು ಕೆಕೆಆರ್ ತಂಡದ ಈ ವರ್ಷದ ಮೊದಲ ತಪ್ಪಾಗಿತ್ತು. ಹೀಗಾಗಿ ನಿಧಾನಗತಿಯ ಬೌಲಿಂಗ್ಗಾಗಿ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಈ ಪಂದ್ಯದಲ್ಲಿ 21 ರನ್ಗೆ ಮೂರು ವಿಕೆಟ್ಗಳನ್ನು ಉರುಳಿಸಿದ ನೂರ್ ಅಹ್ಮದ್ ಅವರು ಸಿಎಸ್ಕೆ ತಂಡವು ಕೋಲ್ಕತಾ ತಂಡವನ್ನು 32 ರನ್ಗಳಿಂದ ಮಣಿಸುವಲ್ಲಿ ನೆರವಾದರು. ಸಿಎಸ್ಕೆ ತಂಡವು ಸತತ ಎರಡನೇ ಗೆಲುವು ದಾಖಲಿಸಿತ್ತು.
ಸಂಜು ಸ್ಯಾಮ್ಸನ್(48 ರನ್)ಹಾಗೂ ಡೆವಾಲ್ಡ್ ಬ್ರೆವಿಸ್(41 ರನ್)ಕೊಡುಗೆಯ ನೆರವಿನಿಂದ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಸಿಎಸ್ಕೆ ತಂಡವು ಐದು ವಿಕೆಟ್ಗಳ ನಷ್ಟಕ್ಕೆ 192 ರನ್ ಗಳಿಸಿತ್ತು.
ಎಡಗೈ ಸ್ಪಿನ್ನರ್ ನೂರ್ ಅಹ್ಮದ್ ಅವರು ಕೋಲ್ಕತಾ ತಂಡವನ್ನು 7 ವಿಕೆಟ್ಗಳ ನಷ್ಟಕ್ಕೆ 160 ರನ್ಗೆ ನಿಯಂತ್ರಿಸಲು ನೆರವಾದರು. ಕೆಕೆಆರ್ ತಂಡವು 2026ರ ಆವೃತ್ತಿಯ ಐಪಿಎಲ್ನಲ್ಲಿ ಐದು ಪಂದ್ಯಗಳನ್ನು ಆಡಿದ್ದರೂ ಒಂದೂ ಪಂದ್ಯವನ್ನು ಗೆದ್ದಿಲ್ಲ.
ಮಳೆಗಾಹುತಿಯಾದ ಪಂದ್ಯದಲ್ಲಿ ಒಂದು ಅಂಕವನ್ನು ಗಳಿಸಿದ್ದ ಕೆಕೆಆರ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸತತ ಮೂರು ಸೋಲಿನೊಂದಿಗೆ ಪ್ರಸಕ್ತ ಐಪಿಎಲ್ ಆರಂಭಿಸಿರುವ ಸಿಎಸ್ಕೆ ಇದೀಗ ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ.
ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಎಂ.ಎಸ್.ಧೋನಿ ಮರಳಿಕೆಗಾಗಿ ಸಿಎಸ್ಕೆ ತಂಡವು ಈಗಲೂ ಕಾಯುತ್ತಿದೆ. ಅವರು ಈ ತನಕ ಒಂದೂ ಪಂದ್ಯವನ್ನು ಆಡಿಲ್ಲ.






