T20 ವಿಶ್ವಕಪ್ ಟೂರ್ನಿಯಿಂದ ವಂಚಿತರಾದ ಗಿಲ್: ವೌನ ಮುರಿದ ಅಜಿತ್ ಅಗರ್ಕರ್

ಶುಭಮನ್ ಗಿಲ್ , ಅಜಿತ್ ಅಗರ್ಕರ್ | Photo Credit : PTI
ಹೊಸದಿಲ್ಲಿ, ಡಿ.20: ಅತ್ಯಂತ ಪ್ರಮುಖ ನಿರ್ಧಾರವೊಂದರಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯು ಶನಿವಾರ ಫಾರ್ಮ್ ನಲ್ಲಿಲ್ಲದ ಉಪ ನಾಯಕ ಶುಭಮನ್ ಗಿಲ್ ಅವರನ್ನು ಸ್ವದೇಶದಲ್ಲಿ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಭಾರತದ 15 ಸದಸ್ಯರ ತಂಡದಿಂದ ಹೊರಗಿಟ್ಟಿದೆ. ಫಾರ್ಮ್ ನಲ್ಲಿರುವ ಇಶಾನ್ ಕಿಶನ್ ಮತ್ತೆ ತಂಡಕ್ಕೆ ವಾಪಸಾಗಿದ್ದು, ಜಿತೇಶ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ರನ್ ಬರ ಎದುರಿಸುತ್ತಿರುವ ಕಾರಣ ಗಿಲ್ ರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಒಪ್ಪಿಕೊಂಡಿದ್ದಾರೆ. ‘‘ಗಿಲ್ ಅವರು ರನ್ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ನಮಗೆ ಈಗ ಉಪ ನಾಯಕನ ಅಗತ್ಯವಿದೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಅಗರ್ಕರ್ ಹೇಳಿದ್ದಾರೆ.
ಈ ಹಿಂದೆ ಭಾರತದ ಏಶ್ಯ ಕಪ್ ವಿಜೇತ ತಂಡದ ಭಾಗವಾಗಿದ್ದ ರಿಂಕು ಸಿಂಗ್ ಅವರು ಜಿತೇಶ್ ಬದಲಿಗೆ ನಿಯೋಜಿತ ಫಿನಿಶರ್ ಪಾತ್ರದಲ್ಲಿ ತಂಡಕ್ಕೆ ವಾಪಸಾಗಿದ್ದಾರೆ. ಇಶಾನ್ ಹೆಚ್ಚುವರಿ ವಿಕೆಟ್ ಕೀಪರ್ ಆಗಿದ್ದು, ಅವರು ಮೀಸಲು ಆರಂಭಿಕ ಆಟಗಾರನಾಗಿದ್ದಾರೆ.





