ವಿಂಬಲ್ಡನ್: ಸತತ 3ನೇ ಬಾರಿ ಫೈನಲ್ ಗೆ ತಲುಪಿದ ಅಲ್ಕರಾಝ್

ಕಾರ್ಲೊಸ್ ಅಲ್ಕರಾಝ್ | PC ; X
ಲಂಡನ್: ಅಮೆರಿಕದ ಟೇಲರ್ ಫ್ರಿಟ್ಝ್ರನ್ನು ಮಣಿಸಿದ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಸತತ ಮೂರನೇ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಮೊದಲ ಸೆಮಿ ಫೈನಲ್ನಲ್ಲಿ 2ನೇ ಶ್ರೇಯಾಂಕದ ಅಲ್ಕರಾಝ್ ಅವರು ಟೇಲರ್ ರನ್ನು 6-4, 5-7, 6-3, 7-6(6) ಸೆಟ್ ಗಳ ಅಂತರದಿಂದ ಮಣಿಸಿದರು.
ಸತತ 24ನೇ ಪಂದ್ಯವನ್ನು ಜಯಿಸಿದ ಅಲ್ಕರಾಝ್ ರವಿವಾರ ನಡೆಯಲಿರುವ ಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಅಥವಾ 24 ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ.
6ನೇ ಗ್ರ್ಯಾನ್ ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಅಲ್ಕರಾಝ್ ಅವರು 2023 ಹಾಗೂ 2024ರ ವಿಂಬಲ್ಡನ್ ಫೈನಲ್ನಲ್ಲಿ ಜೊಕೊವಿಕ್ ಗೆ ಸೋಲುಣಿಸಿದ್ದರು. ಈ ತನಕ ಆಡಿರುವ ಎಲ್ಲ 5 ಫೈನಲ್ನಲ್ಲೂ ಜಯಶಾಲಿಯಾಗಿದ್ದಾರೆ. ಇದರಲ್ಲಿ ತಿಂಗಳ ಹಿಂದೆ ಗೆದ್ದಿರುವ ಫ್ರೆಂಚ್ ಓಪನ್ ಪ್ರಶಸ್ತಿಯೂ ಸೇರಿದೆ.
ಕಳೆದ ವರ್ಷ ಯು.ಎಸ್ ಓಪನ್ ಫೈನಲ್ ನಲ್ಲಿ ಸೋತಿದ್ದ ಫ್ರಿಟ್ಝ್ ಅವರು 2009ರ ನಂತರ ಮೊದಲ ಬಾರಿ ವಿಂಬಲ್ಡನ್ ಫೈನಲ್ ತಲುಪಿದ ಅಮೆರಿಕದ ಮೊದಲ ಆಟಗಾರನಾಗುವ ಕನಸು ಕಂಡಿದ್ದರು.





