ಜಪಾನ್ ಓಪನ್ ಟೆನಿಸ್ ಟೂರ್ನಿ : ಅಲ್ಕರಾಝ್ ಅಂತಿಮ-16ರ ಸುತ್ತಿಗೆ ಲಗ್ಗೆ

Photo Credit - thewhistler
ಟೋಕಿಯೊ, ಸೆ.25: ವಿಶ್ವದ ನಂ.1 ಆಟಗಾರ ಕಾರ್ಲೊಸ್ ಅಲ್ಕರಾಝ್ ಅವರು ಪಂದ್ಯದ ಮಧ್ಯೆ ಕಾಡಿದ ಗಾಯದ ಭೀತಿ ಹಾಗೂ ಮಳೆಯ ಕಾಟದಿಂದ ಹೊರ ಬಂದು ಅರ್ಜೆಂಟೀನದ ಸೆಬಾಸ್ಟಿಯನ್ ಬಾಯೆಝ್ರನ್ನು ನೇರ ಸೆಟ್ಗಳಿಂದ ಮಣಿಸಿ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತಿಗೆ ತಲುಪಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಸ್ಪೇನ್ ಆಟಗಾರ ಅಲ್ಕರಾಝ್ ಅವರು ಸೆಬಾಸ್ಟಿಯನ್ ಅವರನ್ನು 6-4, 6-2 ನೇರ ಸೆಟ್ಗಳ ಅಂತರದಿಂದ ಸದೆಬಡಿದರು.
ಮೊದಲ ಸೆಟ್ ಆಡುತ್ತಿದ್ದಾಗ ಕಾಲುನೋವಿಗೆ ಒಳಗಾದ ಅಲ್ಕರಾಝ್ ಚಿಕಿತ್ಸೆ ಪಡೆದು ಪಂದ್ಯ ಮುಂದುವರಿಸಿದರು. ಮಳೆಯಿಂದಾಗಿ 30 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು.
ಎಟಿಪಿ 500 ಟೂರ್ನಿಯ ಅಂತಿಮ-16ರ ಸುತ್ತಿನಲ್ಲಿ ಅಲ್ಕರಾಝ್ ಅವರು ಬೆಲ್ಜಿಯಂನ ಝಿಝೌ ಬರ್ಗ್ಸ್ ಅವರನ್ನು ಎದುರಿಸಲಿದ್ದಾರೆ.
ನಾರ್ವೆಯ 4ನೇ ಶ್ರೇಯಾಂಕದ ಕಾಸ್ಪರ್ ರೂಡ್ ಅವರು ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡು ಸ್ಥಳೀಯ ಆಟಗಾರ ಶಿಂಟೊರಾ ಮೊಚಿಝುಕಿ ಅವರನ್ನು 4-6, 6-1,6-1 ಸೆಟ್ಗಳ ಅಂತರದಿಂದ ಮಣಿಸಿದರು. ರೂಡ್ ಅವರು ಮುಂದಿನ ಸುತ್ತಿನಲ್ಲಿ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಅವರನ್ನು ಎದುರಿಸಲಿದ್ದಾರೆ.
ಅಮೆರಿಕದ 2ನೇ ಶ್ರೇಯಾಂಕದ ಟೇಲರ್ ಫ್ರಿಟ್ಝ್ ಅವರು ಕೆನಡಾದ ಗ್ಯಾಬ್ರಿಯೆಲ್ ಡಿಯಾಲೊರನ್ನು 4-6, 6-3, 7-6(3) ಸೆಟ್ಗಳ ಅಂತರದಿಂದ ಸೋಲಿಸಿದರು.
3ನೇ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ ಹೋಲ್ಗರ್ ರೂನ್ ಅವರು ಸರ್ಬಿಯದ ಹಮದ್ ಮೆಡ್ಜೆಡೋವಿಕ್ರನ್ನು 7-6(7), 6-1 ಸೆಟ್ಗಳ ಅಂತರದಿಂದ ಸೋಲಿಸಿದರು.
ಜಪಾನಿನ ಕ್ವಾಲಿಫೈಯರ್ ಶೊ ಶಿಮಬುಕುರೊ ಝೆಕ್ನ 5ನೇ ಶ್ರೇಯಾಂಕದ ಥಾಮಸ್ ಮಚಾಕ್ರನ್ನು 6-3, 7-6(4) ಸೆಟ್ಗಳ ಅಂತರದಿಂದ ಮಣಿಸಿದರು.







