ಯು.ಎಸ್. ಓಪನ್ | ಸತತ 3ನೇ ಫೈನಲ್ ನಲ್ಲಿ ಅಲ್ಕರಾಝ್-ಸಿನ್ನರ್ ಪೈಪೋಟಿ

PC : PTI
ನ್ಯೂಯಾರ್ಕ್, ಸೆ.6: ಹಾಲಿ ಚಾಂಪಿಯನ್ ಜನ್ನಿಕ್ ಸಿನ್ನರ್ ಹಾಗೂ ಸ್ಪೇನ್ನ ಯುವ ಆಟಗಾರ ಕಾರ್ಲೊಸ್ ಅಲ್ಕರಾಝ್ ಯು.ಎಸ್.ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಗೆ ತಲುಪಿದ್ದಾರೆ. ಈ ವರ್ಷ ಸತತ ಮೂರನೇ ಗ್ರ್ಯಾನ್ಸ್ಲಾಮ್ ಟೂರ್ನಿಯ ಫೈನಲ್ನಲ್ಲಿ ಈ ಇಬ್ಬರು ಆಟಗಾರರು ಪ್ರಶಸ್ತಿಗಾಗಿ ಹೋರಾಡುವ ಮೂಲಕ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸೆಮಿ ಫೈನಲ್ ನಲ್ಲಿ ಅಲ್ಕರಾಝ್ ಅವರು ಹಿರಿಯ ಆಟಗಾರ ನೊವಾಕ್ ಜೊಕೊವಿಕ್ರನ್ನು 6-4, 7-6(4), 6-2 ಸೆಟ್ಗಳ ಅಂತರದಿಂದ ಸೋಲಿಸಿದರು.
ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸೆಮಿ ಫೈನಲ್ನಲ್ಲಿ ಇಟಲಿ ಆಟಗಾರ ಸಿನ್ನರ್ ಕೆನಡಾದ ಯುವ ಆಟಗಾರ ಫೆಲಿಕ್ಸ್ ಅಗೆರ್-ಅಲಿಯಸಿಮ್ ರನ್ನು 6-1, 3-6, 6-3, 6-4 ಸೆಟ್ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.1 ಸಿನ್ನರ್ ಹಾಗೂ ವಿಶ್ವದ ನಂ.2 ಅಲ್ಕರಾಝ್ ನಡುವೆ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿರುವ ಐತಿಹಾಸಿಕ ಯು.ಎಸ್. ಓಪನ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಒಂದೇ ವರ್ಷದಲ್ಲಿ ಸತತ ಮೂರು ಗ್ರ್ಯಾನ್ಸ್ಲಾಮ್ ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಇಬ್ಬರು ಆಟಗಾರರು(ಸಿನ್ನರ್-ಅಲ್ಕರಾಝ್) ಮುಖಾಮುಖಿಯಾಗುತ್ತಿರುವುದು ಇದೇ ಮೊದಲು.
‘‘ಈ ಇಬ್ಬರು ಸದ್ಯ ವಿಶ್ವದ ಶ್ರೇಷ್ಠ ಆಟಗಾರರಾಗಿದ್ದಾರೆ’’ ಎಂದು 24 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡೆಯ ಜೊಕೊವಿಕ್ ಅಭಿಪ್ರಾಯಪಟ್ಟಿದ್ದಾರೆ.
ಈ ಇಬ್ಬರು ಆಟಗಾರರು ಪುರುಷರ ಟೆನಿಸ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಸಿನ್ನರ್ ಹಾಗೂ ಅಲ್ಕರಾಝ್ ಹಿಂದಿನ 8 ಗ್ರ್ಯಾನ್ಸ್ಲಾಮ್ ಟ್ರೋಫಿಗಳನ್ನು ಹಂಚಿಕೊಂಡಿದ್ದಾರೆ. ಅಲ್ಕರಾಝ್ ಸದ್ಯ 5 ಗ್ರ್ಯಾನ್ಸ್ಲಾಮ್ ಟೂರ್ನಿಗಳನ್ನು ಜಯಿಸಿದ್ದರೆ, ಸಿನ್ನರ್ 4 ಗ್ರ್ಯಾನ್ಸ್ಲಾಮ್ ಟ್ರೋಫಿಗಳನ್ನು ಗೆದ್ದಿದ್ದಾರೆ.
ರವಿವಾರ ನಡೆಯಲಿರುವ ಯು.ಎಸ್. ಓಪನ್ ಫೈನಲ್ ಪಂದ್ಯವು ನಂ.1 ರ್ಯಾಂಕಿಂಗ್ನ್ನು ನಿರ್ಣಯಿಸಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೈನಲ್ ನಲ್ಲಿ ಹಾಜರಾಗುವ ನಿರೀಕ್ಷೆ ಇದೆ.
ಈ ವರ್ಷಪೂರ್ತಿ ಅಲ್ಕರಾಝ್ ಹಾಗೂ ಸಿನ್ನರ್ ನಡುವೆ ತೀವ್ರ ಹೋರಾಟ ಕಂಡುಬಂದಿದೆ. ಅಲ್ಕರಾಝ್ ಜೂನ್ನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದರೆ, ಸಿನ್ನರ್ ಅವರು ಜುಲೈನಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ ಜಯಿಸಿದ್ದರು.
ಸಿನ್ನರ್ ಅವರು ನ್ಯೂಯಾರ್ಕ್ ನಲ್ಲಿ ಸತತ 2ನೇ ಯು.ಎಸ್. ಓಪನ್ ಪ್ರಶಸ್ತಿ ಜಯಿಸಿ ಸ್ವಿಸ್ ಟೆನಿಸ್ ಸೂಪರ್ಸ್ಟಾರ್ ರೋಜರ್ ಫೇಡರರ್ ದಾಖಲೆಯನ್ನು ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ. ಫೆಡರರ್ 2004ರಿಂದ 2008ರ ತನಕ ಸತತ ಐದು ಪ್ರಶಸ್ತಿಗಳನ್ನು ಗೆದ್ದಿದ್ದರು.
ಕಳೆದ ವರ್ಷ ಯು.ಎಸ್. ಓಪನ್ ಟೂರ್ನಿಯ ನಂತರ ಸಿನ್ನರ್ ಅವರು ಇದೀಗ ಸತತ ಐದನೇ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಒಂದೂ ಸೆಟ್ಟನ್ನು ಸೋಲದೆ ಪರಿಪೂರ್ಣ ದಾಖಲೆಯನ್ನು ಕಾಯ್ದುಕೊಂಡಿರುವ ಅಲ್ಕರಾಝ್ ತನ್ನ ಆರನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಿದ್ದಾರೆ.
ಎಪ್ರಿಲ್ನಿಂದ 46 ಪಂದ್ಯಗಳ ಪೈಕಿ 44ರಲ್ಲಿ ಜಯ ಸಾಧಿಸಿರುವ ಅಲ್ಕರಾಝ್ ಅವರು ಹಿಂದಿನ 8 ಟೂರ್ ಲೆವೆಲ್ ಸ್ಪರ್ಧೆಗಳಲ್ಲಿ ಫೈನಲ್ಗೆ ತಲುಪಿದ್ದಾರೆ.
‘‘ನಾವಿಬ್ಬರು ಈ ವರ್ಷ ಸಾಕಷ್ಟು ಪಂದ್ಯವನ್ನು ಆಡಿದ್ದು, ಪರಸ್ಪರ ಚೆನ್ನಾಗಿ ಅರಿತುಕೊಂಡಿದ್ದೇವೆ’’ ಎಂದು ಸಿನ್ನರ್ ಹೇಳಿದ್ದಾರೆ.
ಅಲ್ಕರಾಝ್ ಅವರು ಈ ಹಿಂದಿನ ಎರಡು ಮುಖಾಮುಖಿಗಳಲ್ಲಿ ಜೊಕೊವಿಕ್ಗೆ ಸೋತಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯ ಹಾಗೂ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಸರ್ಬಿಯದ ಆಟಗಾರನಿಗೆ ಸೋತಿದ್ದರು.
‘‘ನಿಜ ಹೇಳಬೇಕೆಂದರೆ ಜೊಕೊವಿಕ್ ವಿರುದ್ಧ ಆಡುವುದು ಸುಲಭವಲ್ಲ. ನಾನು ಅವರು ತನ್ನ ವೃತ್ತಿಜೀವನದಲ್ಲಿ ಸಾಧಿಸಿರುವುದನ್ನು ಯೋಚಿಸುತ್ತಿರುವೆ. ಆ ಬಗ್ಗೆ ಯೋಚಿಸದೆ ಇರುವುದು ಕಷ್ಟ’’ ಎಂದು ಅಲ್ಕರಾಝ್ ಹೇಳಿದರು.
38ರ ಹರೆಯದ ವಯಸ್ಸಿನ ಜೊಕೊವಿಕ್ ಪಂದ್ಯದ ಕೊನೆಯಲ್ಲಿ ದಣಿದವರಂತೆ ಕಂಡುಬಂದರು. ಈ ವರ್ಷದ ಎಲ್ಲ 4 ಗ್ರ್ಯಾನ್ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಕ್ ಸೆಮಿ ಫೈನಲ್ ತಲುಪಿದ್ದಾರೆ. ಆದರೆ ಪ್ರತೀ ಬಾರಿಯೂ ಅಲ್ಕರಾಝ್ ಇಲ್ಲವೇ ಸಿನ್ನರ್ ವಿರುದ್ಧ ಸೋಲುತ್ತಾ ಬಂದಿದ್ದಾರೆ.
25ನೇ ಶ್ರೇಯಾಂಕದ ಫೆಲಿಕ್ಸ್ ಸೆಮಿ ಫೈನಲ್ನಲ್ಲಿ ಸೋತಿದ್ದರೂ ತನ್ನ ಪ್ರದರ್ಶನಕ್ಕೆ ತೃಪ್ತಿ ವ್ಯಕ್ತಪಡಿಸಿದರು. 2021ರ ನಂತರ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಫೆಲಿಕ್ಸ್ ವಿಶ್ವದ ನಂ.3ನೇ ಆಟಗಾರ ಅಲೆಕ್ಸಾಂಡರ್ ಝ್ವೆರೆವ್, 15ನೇ ಶ್ರೇಯಾಂಕದ ಆಂಡ್ರೆ ರುಬ್ಲೇವ್ ಹಾಗೂ 8ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ಅವರನ್ನು ಸೋಲಿಸಿದ್ದರು.







