ವಿಂಬಲ್ಡನ್ ಚಾಂಪಿಯನ್ಶಿಪ್ | ಜೊಕೊವಿಕ್ಗೆ ಸೋಲುಣಿಸಿ ಸತತ ಎರಡನೇ ಪ್ರಶಸ್ತಿ ಗೆದ್ದ ಅಲ್ಕರಾಝ್

ಅಲ್ಕರಾಝ್ | PC : PTI
ಲಂಡನ್ : ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ನೇರ ಸೆಟ್ಗಳಿಂದ ಮಣಿಸಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.
ಸೆಂಟರ್ಕೋರ್ಟ್ನಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ನ 21ರ ಹರೆಯದ ಅಲ್ಕರಾಝ್ 2ನೇ ಶ್ರೇಯಾಂಕದ ಜೊಕೊವಿಕ್ರನ್ನು 6-2, 6-2, 7-6(4) ಸೆಟ್ಗಳ ಅಂತರದಿಂದ ಮಣಿಸಿದರು.
ಅಲ್ಕರಾಝ್ ಕಳೆದ ವರ್ಷದ ಫೈನಲ್ನಲ್ಲೂ ಕೂಡ 5 ಸೆಟ್ಗಳ ರೋಚಕ ಹಣಾಹಣಿಯಲ್ಲಿ ಜೊಕೊವಿಕ್ರನ್ನು ಸೋಲಿಸಿ ವಿಂಬಲ್ಡನ್ ಜಯಿಸಿದ್ದರು.
ಅಲ್ಕರಾಝ್ ಬೆನ್ನುಬೆನ್ನಿಗೆ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಟ್ರೋಫಿ ಜಯಿಸಿದ ಆರನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಟೆನಿಸ್ ಕೋರ್ಟ್ನಲ್ಲಿ ಪ್ರಾಬಲ್ಯ ಮೆರೆದ ಅಲ್ಕರಾಝ್ ಇದೀಗ ಒಟ್ಟು 4 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದಂತಾಗಿದೆ. ಎರಡು ವಿಂಬಲ್ಡನ್ ಚಾಂಪಿಯನ್ಶಿಪ್ ಅಲ್ಲದೆ, 2022ರಲ್ಲಿ ಯುಎಸ್ ಓಪನ್ ಹಾಗೂ ಕಳೆದ ತಿಂಗಳು ಫ್ರೆಂಚ್ ಓಪನ್ ಜಯಿಸಿದ್ದಾರೆ.
ಈ ಸೋಲು ಜೊಕೊವಿಕ್ಗೆ ತೀವ್ರ ಹಿನ್ನಡೆಯಾಗಿದೆ. 24 ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿರುವ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಮುರಿಯುವ ಹಾಗೂ 8ನೇ ವಿಂಬಲ್ಡನ್ ಜಯಿಸಿ ರೋಜರ್ ಫೆಡರರ್ ದಾಖಲೆ ಸಮಬಲಗೊಳಿಸುವ ಜೊಕೊವಿಕ್ ಗುರಿ ಈಡೇರಲಿಲ್ಲ.







