ಆ್ಯಡಮ್ ಗಿಲ್ಕ್ರಿಸ್ಟ್ ಸಾರ್ವಕಾಲಿಕ ದಾಖಲೆ ಮುರಿದ ಅಲೆಕ್ಸ್ ಕ್ಯಾರಿ

ಅಲೆಕ್ಸ್ ಕ್ಯಾರಿ | PC : PTI
ಹೊಸದಿಲ್ಲಿ: ಏಶ್ಯಖಂಡದ ಪಿಚ್ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ ಆಸ್ಟ್ರೇಲಿಯದ ಮೊದಲ ವಿಕೆಟ್ಕೀಪರ್-ಬ್ಯಾಟರ್ ಎನಿಸಿಕೊಂಡ ಅಲೆಕ್ಸ್ ಕ್ಯಾರಿ ಇತಿಹಾಸದ ಪುಟದಲ್ಲಿ ತನ್ನ ಹೆಸರು ಮೂಡಿಸಿದರು.
ಈ ಸಾಧನೆಯ ಮೂಲಕ ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ 144 ರನ್ ಗಳಿಸಿದ್ದ ಲೆಜೆಂಡರಿ ವಿಕೆಟ್ಕೀಪರ್ ಆ್ಯಡಮ್ ಗಿಲ್ಕ್ರಿಸ್ಟ್ ದಾಖಲೆಯನ್ನು ಕ್ಯಾರಿ ಮುರಿದರು.
ಗಾಲೆಯಲ್ಲಿ ಶ್ರೀಲಂಕಾದ ವಿರುದ್ಧ ನಡೆದ ದ್ವಿತೀಯ ಟೆಸ್ಟ್ನ 3ನೇ ದಿನದಾಟವಾದ ಶನಿವಾರ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ನಲ್ಲಿ ಕ್ಯಾರಿ ಈ ಮೈಲಿಗಲ್ಲು ತಲುಪಿದರು.
87ನೇ ಓವರ್ನಲ್ಲಿ ಪ್ರಭಾತ್ ಜಯಸೂರ್ಯ ಎಸೆತವನ್ನು ಸ್ವೀಪ್ ಮಾಡಿದ ಕ್ಯಾರಿ 150 ರನ್ ಪೂರೈಸಿದರು. ಕ್ಯಾರಿ ತನ್ನ ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಈ ಸಾಧನೆಯನ್ನು ಮಾಡಿರಲಿಲ್ಲ.
ಕ್ಯಾರಿ 188 ಎಸೆತಗಳಲ್ಲಿ 82.98ರ ಸ್ಟ್ರೈಕ್ರೇಟ್ನಲ್ಲಿ 15 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಸಹಾಯದಿಂದ 156 ರನ್ ಗಳಿಸಿದ್ದಾಗ ಜಯಸೂರ್ಯಗೆ ವಿಕೆಟ್ ಒಪ್ಪಿಸಿದರು.
ಗಿಲ್ಕ್ರಿಸ್ಟ್ ನಂತರ ಏಶ್ಯದಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯದ 2ನೇ ವಿಕೆಟ್ಕೀಪರ್-ಬ್ಯಾಟರ್ ಎನಿಸಿಕೊಂಡ ಕ್ಯಾರಿ ಅವರು ಆಸ್ಟ್ರೇಲಿಯ ತಂಡವು ಮೊದಲ ಇನಿಂಗ್ಸ್ನಲ್ಲಿ 414 ರನ್ ಗಳಿಸಿ 157 ರನ್ ಮುನ್ನಡೆ ಪಡೆಯುವಲ್ಲಿ ನಿರ್ಣಾಯಕ ಪಾತ್ರವಹಿಸಿದರು.







