ಟೊರೊಂಟೊ ಮಾಸ್ಟರ್ಸ್: 500ನೇ ಪಂದ್ಯ ಗೆದ್ದ ಅಲೆಕ್ಸಾಂಡರ್ ಝ್ವೆರೆವ್

ಅಲೆಕ್ಸಾಂಡರ್ ಝ್ವೆರೆವ್ | PC : X
ಟೊರೊಂಟೊ, ಆ.1: ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಅವರು ಟೊರೊಂಟೊ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ತನ್ನ 500ನೇ ಎಟಿಪಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.
ಮ್ಯಾಟಿಯೊ ಅರ್ನಾಲ್ಡಿ ಅವರನ್ನು 6-7(5/7), 6-3, 6-2 ಸೆಟ್ ಗಳ ಅಂತರದಿಂದ ಮಣಿಸಿರುವ ಝ್ವೆರೆವ್ ಅವರು ಯು.ಎಸ್.ಓಪನ್ ಗೆ ಪೂರ್ವ ತಯಾರಿ ಟೂರ್ನಿಯಾಗಿರುವ ಟೊರೊಂಟೊ ಟೂರ್ನಿಯಲ್ಲಿ 4ನೇ ಸುತ್ತಿಗೆ ತಲುಪಿದ್ದಾರೆ.
ಅಗ್ರ ಶ್ರೇಯಾಂಕದ ಝ್ವೆರೆವ್ 82 ನಿಮಿಷಗಳ ಕಾಲ ನಡೆದ ಮೊದಲ ಸೆಟ್ ನಲ್ಲಿ ಪರದಾಟ ನಡೆಸಿದರು. ಆ ನಂತರ ಎರಡು ಸೆಟ್ಗಳನ್ನು ಗೆದ್ದುಕೊಂಡು ತನ್ನ ಲಯ ಕಂಡುಕೊಂಡಿರುವ ಝ್ವೆರೆವ್ ಈ ವರ್ಷ ಎರಡನೇ ಬಾರಿ ಅರ್ನಾಲ್ಡಿ ಅವರನ್ನು ಮಣಿಸಿದರು.
‘‘ಇದು ಮಹತ್ವದ ಸಾಧನೆಯಾಗಿದೆ, ಹೆಚ್ಚಿನ ಆಟಗಾರರು ಈ ಮೈಲಿಗಲ್ಲು ತಲುಪಿಲ್ಲ. ನಾನು 500ಕ್ಕೂ ಅಧಿಕ ಗೆಲುವು ದಾಖಲಿಸಲು ಬಯಸಿದ್ದೇನೆ. ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆಲ್ಲುವೆ’’ ಎಂದು ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ ನಂತರ ಝ್ವೆರೆವ್ ಹೇಳಿದ್ದಾರೆ.
ಪುರುಷರ ಟೆನಿಸ್ನಲ್ಲಿ ಜಿಮ್ಮಿ ಕಾನರ್ಸ್ ಅತ್ಯಂತ ಹೆಚ್ಚು ಪಂದ್ಯಗಳನ್ನು ಜಯಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಮೆರಿಕದ ಆಟಗಾರ ತನ್ನ ವೃತ್ತಿಬದುಕಿನಲ್ಲಿ 1,274 ಪಂದ್ಯಗಳನ್ನು ಗೆದ್ದಿದ್ದರು. ರೋಜರ್ ಫೆಡರರ್(1,251), ನೊವಾಕ್ ಜೊಕೊವಿಕ್(1,150)ಹಾಗೂ ರಫೆಲ್ ನಡಾಲ್(1,080 ಗೆಲುವು)ಕೂಡ ಪಟ್ಟಿಯಲ್ಲಿದ್ದಾರೆ.
ಝ್ವೆರೆವ್ ಮುಂದಿನ ಸುತ್ತಿನಲ್ಲಿ ಫ್ರಾನ್ಸಿಸ್ಕೊ ಸೆರುಂಡೊಲೊರನ್ನು ಎದುರಿಸಲಿದ್ದಾರೆ. ಫ್ರಾನ್ಸಿಸ್ಕೊ ಅವರು ಅರ್ಜೆಂಟೀನದ ಥಾಮಸ್ ಎಚೆವೆರ್ರಿ ಅವರನ್ನು 6-3, 6-4 ನೇರ ಸೆಟ್ಗಳಿಂದ ಮಣಿಸಿದ್ದರು.
*ಗರಿಷ್ಠ ಪಂದ್ಯಗಳನ್ನು ಗೆದ್ದಿರುವ ಪ್ರಮುಖ ಟೆನಿಸ್ ಆಟಗಾರರು
1,274-ಜಿಮ್ಮಿ ಕಾನರ್ಸ್
1,251-ರೋಜರ್ ಫೆಡರರ್
1,150-ನೊವಾಕ್ ಜೊಕೊವಿಕ್
1,080-ರಫೆಲ್ ನಡಾಲ್
1,068-ಇವಾನ್ ಲೆಂಡ್ಲ್
951-ಗುಲ್ಲೆರ್ಮೊ ವಿಲಸ್







