French Open | ಪುರುಷರ ಸಿಂಗಲ್ಸ್ ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಚಾಂಪಿಯನ್

Photo : PTI
ಪ್ಯಾರಿಸ್, ಜೂ. 7: ಐದು ಸೆಟ್ ಗಳ ರೋಚಕ ಫೈನಲ್ ಪಂದ್ಯದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ಅವರನ್ನು ಮಣಿಸಿದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಝ್ವೆರೆವ್ 6-1, 4-6, 6-4, 6-7 (5/7), 6-1 ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
ನಾಲ್ಕನೇ ಬಾರಿ ಫೈನಲ್ ನಲ್ಲಿ ಆಡಿದ ಝ್ವೆರೆವ್ ಕೊನೆಗೂ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದರು.
ಎರಡನೇ ಶ್ರೇಯಾಂಕದ ಝ್ವೆರೆವ್ ಮೊದಲ ಸೆಟ್ ಅನ್ನು 6-1ರಿಂದ ಗೆದ್ದು ಉತ್ತಮ ಆರಂಭ ಪಡೆದರು. ಆದರೆ, ಎರಡನೇ ಸೆಟ್ ಅನ್ನು 6-4ರಿಂದ ಗೆದ್ದ ಕೊಬೊಲ್ಲಿ ತಿರುಗೇಟು ನೀಡಿದರು. ಮೂರನೇ ಸೆಟ್ ಅನ್ನು 6-4 ಅಂತರದಿಂದ ಗೆದ್ದ ಝ್ವೆರೆವ್ ಮತ್ತೆ ಮೇಲುಗೈ ಸಾಧಿಸಿದರು.
ನಾಲ್ಕನೇ ಸೆಟ್ ನಲ್ಲೂ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಟೈಬ್ರೇಕರ್ ನಲ್ಲಿ ಕೊಬೊಲ್ಲಿ 7-6 (7/5) ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು ನಿರ್ಣಾಯಕ ಐದನೇ ಸೆಟ್ ಗೆ ಕೊಂಡೊಯ್ದರು.
ಐದನೇ ಹಾಗೂ ಕೊನೆಯ ಸೆಟ್ ನಲ್ಲಿ 6-1ರಿಂದ ಜಯ ಸಾಧಿಸಿದ ಝ್ವೆರೆವ್, ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.




