ಚೀನಾ ಓಪನ್ ಟೆನಿಸ್ ಟೂರ್ನಿ : ಗೌಫ್ಗೆ ಸೋಲು, ಅನಿಸಿಮೋವಾ ಫೈನಲ್ಗೆ

Photo Credit: KENA BETANCUR
ಬೀಜಿಂಗ್,ಅ.4: ಅಮೆರಿಕನ್ ಓಪನ್ನ ರನ್ನರ್-ಅಪ್ ಅಮಂಡಾ ಅನಿಸಿಮೋವಾ ಹಾಲಿ ಚಾಂಪಿಯನ್ ಕೊಕೊ ಗೌಫ್ರನ್ನು ಕೇವಲ 58 ನಿಮಿಷಗಳಲ್ಲಿ ಸೋಲುಣಿಸುವ ಮೂಲಕ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ನಲ್ಲಿ 3ನೇ ಶ್ರೇಯಾಂಕದ ಅಮೆರಿಕದ ಆಟಗಾರ್ತಿ ಅನಿಸಿಮೋವಾ ಅವರು ದ್ವಿತೀಯ ಶ್ರೇಯಾಂಕದ ತಮ್ಮದೇ ದೇಶದ ಗೌಫ್ರನ್ನು 6-1, 6-2 ಸೆಟ್ಗಳ ಅಂತರದಿಂದ ಮಣಿಸಿದರು.
ಅನಿಸಿಮೋವಾ ರವಿವಾರ ನಡೆಯಲಿರುವ ಫೈನಲ್ನಲ್ಲಿ ಅಮೆರಿಕದ 5ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಅಥವಾ ಝೆಕ್ ಗಣರಾಜ್ಯದ 26ನೇ ಶ್ರೇಯಾಂಕದ ಲಿಂಡಾ ನೊಸ್ಕೋವಾ ಅವರನ್ನು ಎದುರಿಸಲಿದ್ದಾರೆ.
ಅನಿಸಿಮೋವಾ 15 ನಿಮಿಷಗಳಲ್ಲಿ 5-0 ಮುನ್ನಡೆ ಪಡೆದು ಉತ್ತಮ ಆರಂಭ ಪಡೆದರು. 21ರ ಹರೆಯದ ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಗೌಫ್ ಎರಡು ಬಾರಿ ತಪ್ಪೆಸಗಿ ಅನಿಸಿಮೋವಾಗೆ 2 ಪಾಯಿಂಟ್ಸ್ ಬಿಟ್ಟುಕೊಟ್ಟರು.
ಗೌಫ್ 2ನೇ ಸೆಟ್ನಲ್ಲೂ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದು ಮತ್ತೊಮ್ಮೆ 5-0 ಮುನ್ನಡೆ ಪಡೆದರು.
ಗೌಫ್ ಅವರು ಈ ಹಿಂದೆ 2023ರಲ್ಲಿ ಬೀಜಿಂಗ್ನ ಸೆಂಟರ್ ಡೈಮಂಡ್ ಕೋರ್ಟ್ನಲ್ಲಿ ಪೋಲ್ಯಾಂಡ್ನ ವಿಶ್ವದ ನಂ.2ನೇ ಆಟಗಾರ್ತಿ ಇಗಾ ಸ್ವಿಯಾಟೆಕ್ ವಿರುದ್ಧ ಸೆಮಿ ಫೈನಲ್ನಲ್ಲಿ ಸೋತಿದ್ದರು.







