ಅಮೆರಿಕದ ಚೆಸ್ ತಾರೆ ಡೇನಿಯಲ್ ನಿಧನ

ಡೇನಿಯಲ್ ನರೋಡಿಟಿಸ್ಕಿ | Photo Credit ; NDTV
ನ್ಯೂಯಾರ್ಕ್, ಅ.21: ಬಾಲ್ಯದಲ್ಲೇ ಚೆಸ್ನತ್ತ ಒಲವು ಹೊಂದಿದ್ದ ಚೆಸ್ ಗ್ರ್ಯಾಂಡ್ಮಾಸ್ಟರ್ ಅಮೆರಿಕದ ಅತ್ಯಂತ ಪ್ರಭಾವಿ ಕ್ರೀಡಾತಾರೆಯರ ಪೈಕಿ ಒಬ್ಬರಾಗಿದ್ದ ಡೇನಿಯಲ್ ನರೋಡಿಟಿಸ್ಕಿ ಸೋಮವಾರ ನಿಧನರಾದರು.
ಡೇನಿಯಲ್ ಅವರಿಗೆ 29 ವರ್ಷ ವಯಸ್ಸಾಗಿತ್ತು. ಡೇನಿಯಲ್ ತರಬೇತಿ ಪಡೆದ ಹಾಗೂ ತರಬೇತುದಾರರಾಗಿ ಕೆಲಸ ಮಾಡಿದ ಉತ್ತರ ಕರೋಲಿನಾದ ಚಾರ್ಲೆಟ್ ಚೆಸ್ ಸೆಂಟರ್ ಸಾಮಾಜಿಕ ಮಾಧ್ಯಮದಲ್ಲಿ ಅವರ ನಿಧನದ ಸುದ್ದಿಯನ್ನು ಪ್ರಕಟಿಸಿದೆ.
ಡೇನಿಯಲ್ ‘ಪ್ರತಿಭಾನ್ವಿತ ಚೆಸ್ ಆಟಗಾರ, ಶಿಕ್ಷಕ ಹಾಗೂ ಚೆಸ್ ಸಮುದಾಯದ ಪ್ರೀತಿಯ ಸದಸ್ಯರಾಗಿದ್ದರು’’ ಎಂದು ಚಾರ್ಲೆಟ್ ಚೆಸ್ ಸೆಂಟರ್ ತಿಳಿಸಿದೆ.
‘ಚೆಸ್ ಆಟದ ಮೇಲಿನ ಡೇನಿಯಲ್ ಅವರ ಉತ್ಸಾಹ ಹಾಗೂ ಪ್ರೀತಿಗಾಗಿ, ಅವರು ಪ್ರತಿದಿನ ನಮಗೆ ತಂದ ಸಂತೋಷ ಹಾಗೂ ಸ್ಫೂರ್ತಿಗಾಗಿ ಅವರನ್ನು ನೆನಪಿಸಿಕೊಳ್ಳೋಣ’ ಎಂದು ಕೇಂದ್ರವು ಹಂಚಿಕೊಂಡ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಡೇನಿಯಲ್ ನಿಧನಕ್ಕೆ ಕಾರಣವೇನೆಂದು ತಕ್ಷಣವೇ ತಿಳಿದುಬಂದಿಲ್ಲ.
ಡೇನಿಯಲ್ ಅವರು ತನ್ನ 18ನೇ ವಯಸ್ಸಿನಲ್ಲಿ ಗ್ರ್ಯಾಂಡ್ಮಾಸ್ಟರ್ ಪಟ್ಟಕ್ಕೇರಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದ ಈ ಆಟಗಾರ 12 ವರ್ಷದೊಳಗಿನವರ ವಿಶ್ವ ಚಾಂಪಿಯನ್ಶಿಪ್ ಗೆದ್ದಿದ್ದರು.





