Asian Games 2026 | ಸ್ಕ್ವಾಶ್ ಮಹಿಳೆಯರ ಸಿಂಗಲ್ಸ್ ನಲ್ಲಿ ಅನಾಹತ್ ಸಿಂಗ್ ಗೆ ಐತಿಹಾಸಿಕ ಬೆಳ್ಳಿ

ಅನಾಹತ್ ಸಿಂಗ್ (Photo: PTI)
ಹೊಸದಿಲ್ಲಿ /ನಗೋಯಾ : 2026ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ಸ್ ಸ್ಕ್ವಾಶ್ ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಫೈನಲ್ ನಲ್ಲಿ ಮಲೇಷ್ಯಾದ ಸಿವಸಂಗರಿ ಸುಬ್ರಮಣಿಯಂ ವಿರುದ್ಧ ನೇರ ಸೆಟ್ ಗಳಲ್ಲಿ ಸೋಲನುಭವಿಸಿದ ಅನಾಹತ್, ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಹಿಳೆಯರ ಸಿಂಗಲ್ಸ್ ಸ್ಕ್ವಾಶ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಿವಸಂಗರಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅದ್ಭುತ ಪ್ರದರ್ಶನದ ಮೂಲಕ ಅನಾಹತ್ ಅವರನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸಿದರು.
ಪಂದ್ಯದಲ್ಲಿ ಸಿವಸಂಗರಿ ಸಂಪೂರ್ಣವಾಗಿ ಪ್ರಾಬಲ್ಯ ಮೆರೆದರು. ರ್ಯಾಲಿಗಳ ಮೇಲಿನ ನಿಯಂತ್ರಣ, ನಿಖರವಾದ ಡ್ರಾಪ್ ಶಾಟ್ಗಳ ಮೂಲಕ ಅನಾಹತ್ ಗೆ ಮೇಲುಗೈ ಸಾಧಿಸಲು ಯಾವುದೇ ಅವಕಾಶ ನೀಡಲಿಲ್ಲ. ಸಂದರ್ಭೋಚಿತ ಆಕ್ರಮಣಕಾರಿ ಆಟದ ಮೂಲಕ ಅರ್ಹವಾಗಿಯೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು.
18 ವರ್ಷದ ಅನಾಹತ್ ಸಿಂಗ್ 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ 14ನೇ ವಯಸ್ಸಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅದೇ ವರ್ಷ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. 2023ರಲ್ಲಿ 15ನೇ ವಯಸ್ಸಿನಲ್ಲಿ ಹಿರಿಯರ ರಾಷ್ಟ್ರೀಯ ಸ್ಕ್ವಾಶ್ ಚಾಂಪಿಯನ್ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದರು.
2026ರ ಜುಲೈನಲ್ಲಿ ಕೆನಡಾದ ನಯಾಗರಾ-ಆನ್-ದಿ-ಲೇಕ್ನಲ್ಲಿ ನಡೆದ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್ಶಿಪ್ನಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅವರು, ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದರು.
ಪ್ರಸ್ತುತ ಪಿಎಸ್ಎ (PSA) ವಿಶ್ವ ರ್ಯಾಂಕಿಂಗ್ನಲ್ಲಿ 20ನೇ ಸ್ಥಾನದಲ್ಲಿರುವ ಅನಾಹತ್, 2026ರ ಫೆಬ್ರವರಿಯಲ್ಲಿ ವೃತ್ತಿಜೀವನದ ಅತ್ಯುತ್ತಮ 18ನೇ ರ್ಯಾಂಕ್ ತಲುಪಿದ್ದರು.






