704 ವಿಕೆಟ್ನೊಂದಿಗೆ ಟೆಸ್ಟ್ ಕ್ರಿಕೆಟಿಗೆ ಆ್ಯಂಡರ್ಸನ್ ವಿದಾಯ

ಜೇಮ್ಸ್ ಆ್ಯಂಡರ್ಸನ್ | PC : NDTV
ಲಂಡನ್ : ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭವಾದ ಜೇಮ್ಸ್ ಆ್ಯಂಡರ್ಸನ್ ಅವರ ಟೆಸ್ಟ್ ಕ್ರಿಕೆಟ್ ಬದುಕು 21 ವರ್ಷಗಳ ನಂತರ ಅದೇ ಮೈದಾನದಲ್ಲಿ ಅಂತ್ಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ 2ನೇ ಇನಿಂಗ್ಸ್ ನಲ್ಲಿ ಆ್ಯಂಡರ್ಸನ್ 3 ವಿಕೆಟ್ಗಳನ್ನು ಪಡೆದರು. ಒಟ್ಟು 704 ವಿಕೆಟ್ನೊಂದಿಗೆ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದರು.
ಇಂದು ಬೆಳಗ್ಗೆ ಎರಡು ತಂಡಗಳು ಸಾಲಾಗಿ ನಿಂತು ಗೌರವ ರಕ್ಷೆ ನೀಡಿದಾಗ ಹೆಚ್ಚು ಭಾವುಕನಾಗಿದ್ದೆ. ಪ್ರೇಕ್ಷಕರು ಎದ್ದುನಿಂತು ಗೌರವಿಸಿದ್ದು ತುಂಬಾ ವಿಶೇಷವಾಗಿತ್ತು. ಹೌದು, ಈಗಲೂ ನಾನು ಕಣ್ಣೀರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವೆ. 20 ವರ್ಷಗಳ ಕಾಲ ಆಡಿದ್ದಕ್ಕೆ ನನಗೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ. ವೇಗದ ಬೌಲರ್ ಆಗಿ ಇದೊಂದು ಉತ್ತಮ ಪ್ರಯತ್ನವಾಗಿದೆ ಎಂದು ಪಂದ್ಯದ ನಂತರ ಸ್ಕೈ ಕ್ರಿ ಕೆಟ್ಗೆ ಆ್ಯಂಡರ್ಸನ್ ತಿಳಿಸಿದರು.
ನನ್ನ ಪ್ರದರ್ಶನವು ಖುಷಿಕೊಟ್ಟಿದೆ. ವೃತ್ತಿ ಜೀವನದುದ್ದಕ್ಕೂ ಗಾಯದಿಂದ ಮುಕ್ತವಾಗಿದ್ದು ನನ್ನ ಅದೃಷ್ಟ. ಇಂಗ್ಲೆಂಡ್ ಪರ ಆಡುವುದು ವಿಶ್ವದಲ್ಲಿ ಶ್ರೇಷ್ಠ ಕೆಲಸ. ದೀರ್ಘ ಸಮಯ ಆಡುವ ಸೌಭಾಗ್ಯ ನನಗೆ ಲಭಿಸಿತ್ತು ಎಂದು 41ರ ವಯಸ್ಸಿನ ಆ್ಯಂಡರ್ಸನ್ ಹೇಳಿದ್ದಾರೆ.
3ನೇ ದಿನವಾದ ಶುಕ್ರವಾರ ಜೊಶುವಾ ಡಿ ಸಿಲ್ವ(9) ವಿಕೆಟನ್ನು ಪಡೆದ ಆ್ಯಂಡರ್ಸನ್ 704ನೇ ಟೆಸ್ಟ್ ವಿಕೆಟ್ ಪಡೆದರು.
ಆ್ಯಂಡರ್ಸನ್ರ ಕೊನೆಯ ಪಂದ್ಯದ ವೇಳೆ ಅವರ ಪತ್ನಿ ಹಾಗೂ ಇಬ್ಬರು ಪುತ್ರಿಯರ ಸಹಿತ ಕುಟುಂಬ ಸದಸ್ಯರು ಇದ್ದರು. ಆ್ಯಂಡರ್ಸನ್ ಪುತ್ರಿಯರು ದೊಡ್ಡ ಗಂಟೆಯನ್ನು ಬಾರಿಸಿ ಟೆಸ್ಟ್ ಕ್ರಿಕೆಟಿಗೆ ಚಾಲನೆ ನೀಡಿದ್ದರು.
ನಾಸಿರ್ ಹುಸೇನ್ ನಾಯಕತ್ವದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದ್ದ ಆ್ಯಂಡರ್ಸನ್ ಅವರು ಮೈಕಲ್ ವಾನ್ ಹಾಗೂ ಅಲೆಕ್ ಸ್ಟಿವರ್ಟ್ರೊಂದಿಗೆ ಆಡಿದ್ದರು. ಫೈನಲ್ ಟೆಸ್ಟ್ ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಗುಸ್ ಅಟ್ಕಿನ್ಸನ್ ಹಾಗೂ ಜಮ್ಮಿ ಸ್ಮಿತ್ರೊಂದಿಗೆ ಆಡಿದ್ದಾರೆ. ಆ್ಯಂಡರ್ಸನ್ ತನ್ನ ಟೆಸ್ಟ್ ಕ್ರಿಕೆಟ್ನಲ್ಲಿ 109 ಮಂದಿ ಸಹ ಆಟಗಾರರೊಂದಿಗೆ ಆಡಿದ್ದಾರೆ.
ಆ್ಯಂಡರ್ಸನ್ 21 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 40,037 ಎಸೆತಗಳನ್ನು ಬೌಲ್ ಮಾಡಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ 40 ಸಾವಿರಕ್ಕೂ ಅಧಿಕ ಚೆಂಡು ಎಸೆದಿರುವ ಮೊದಲ ವೇಗದ ಬೌಲರ್ ಆಗಿದ್ದಾರೆ.
ಆ್ಯಂಡರ್ಸನ್ ವಿಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 91 ವಿಕೆಟ್ಗಳನ್ನು ಕಬಳಿಸಿದ್ದಾರೆ. ಲಾರ್ಡ್ಸ್ನಲ್ಲಿ 4 ವಿಕೆಟ್ಗಳನ್ನು ಉರುಳಿಸಿ ವಿಂಡೀಸ್ ವಿರುದ್ಧ ಭಾರತದ ದಂತಕತೆ ಕಪಿಲ್ ದೇವ್(89)ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಆಸ್ಟ್ರೇಲಿಯದ ಗ್ಲೆನ್ ಮೆಕ್ಗ್ರಾತ್ ವಿಂಡೀಸ್ ವಿರುದ್ಧ ಒಟ್ಟು 110 ವಿಕೆಟ್ಗಳನ್ನು ಪಡೆದಿದ್ದರು.
ಟೆಸ್ಟ್ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ವಿಶ್ವದ ಮೂರನೇ ಬೌಲರ್ ಆಗಿರುವ ಆ್ಯಂಡರ್ಸನ್ , ಇಂಗ್ಲೆಂಡ್ ತಂಡದ ಪರ ಅತ್ಯಂತ ಹೆಚ್ಚು ವಿಕೆಟ್ ಪಡೆದಿರುವ ಸಾಧನೆಯನ್ನೂ ಮಾಡಿದ್ದಾರೆ.
ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ ವೃತ್ತಿಜೀವನ
ಟೆಸ್ಟ್: 188, ವಿಕೆಟ್: 704, ಬೌಲಿಂಗ್ ಸರಾಸರಿ: 26.45, ಎಕಾನಮಿ: 2.79, 5 ವಿಕೆಟ್ ಗೊಂಚಲು: 32, 10 ವಿಕೆಟ್ ಗೊಂಚಲು: 3, ಬೆಸ್ಟ್ ಇನಿಂಗ್ಸ್: 7-42, ಬೆಸ್ಟ್ ಮ್ಯಾಚ್: 11-72, ಸ್ಟ್ರೈಕ್ರೇಟ್: 56.8, ಎಸೆದ ಚೆಂಡುಗಳು: 40,037, ಗಳಿಸಿದ ರನ್: 1,353, ಗರಿಷ್ಠ ಸ್ಕೋರ್: 81.







