ಐಪಿಎಲ್ ನಿಂದ ಆಟಗಾರನಾಗಿ ಆ್ಯಂಡ್ರಿ ರಸೆಲ್ ನಿವೃತ್ತಿ; ಕೋಚ್ ಆಗಿ KKR ನಲ್ಲಿ ಹೊಸ ಪಾತ್ರ

Photo Credit: K.R. Deepak - thehindu
ಕೋಲ್ಕತಾ, ನ. 30: ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರ ವೆಸ್ಟ್ ಇಂಡೀಸ್ ನ ಆ್ಯಂಡ್ರಿ ರಸೆಲ್ ತಕ್ಷಣದಿಂದ ಜಾರಿಗೆ ಬರುವಂತೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅವರ 12 ಆವೃತ್ತಿಗಳ ಭವ್ಯ ಐಪಿಎಲ್ ಬದುಕಿಗೆ ತೆರೆ ಬಿದ್ದಿದೆ. ಅವರು ಇನ್ನು ಕೋಲ್ಕತಾ ನೈಟ್ ರೈಡರ್ಸ್ ನಲ್ಲಿ ಕೋಚ್ ಪಾತ್ರವನ್ನು ವಹಿಸಲಿದ್ದಾರೆ.
2026ರ ಆವೃತ್ತಿಯ ಹರಾಜಿಗೆ ಮುನ್ನ ಕೋಲ್ಕತಾ ನೈಟ್ ರೈಡರ್ಸ್ ತಂಡವು ರಸೆಲ್ ರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು. ಅವರು ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಬೇರೆ ಐಪಿಎಲ್ ತಂಡಗಳಿಗೆ ಹೋಗಬಹುದು ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ಆಟಗಾರನಾಗಿ ನಿವೃತ್ತಿ ಹೊಂದಲು ಹಾಗೂ ಅದೇ ತಂಡದಲ್ಲಿ ಕೋಚ್ ಹುದ್ದೆಯನ್ನು ನಿಭಾಯಿಸಲು ರಸೆಲ್ ನಿರ್ಧರಿಸಿದ್ದಾರೆ.
ತನ್ನ ನಿರ್ಧಾರವನ್ನು ಘೋಷಿಸುವ ರಸೆಲ್ ರ ವೀಡಿಯೊವನ್ನು ಕೋಲ್ಕತಾ ನೈಟ್ ರೈಡರ್ಸ್ ರವಿವಾರ ಬಿಡುಗಡೆಗೊಳಿಸಿದೆ. ರಸೆಲ್ ಇತರ ಜಾಗತಿಕ ಲೀಗ್ ಗಳಲ್ಲಿ ಆಡುವುದನ್ನು ಮುಂದುವರಿಸುತ್ತಾರಾದರೂ, ಕೋಲ್ಕತಾ ನೈಟ್ ರೈಡರ್ಸ್ ನಲ್ಲಿ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ತಾನು ಕೋಲ್ಕತಾ ನೈಟ್ ರೈಡರ್ಸ್ ಕುಟುಂಬವನ್ನು ಸಂಪೂರ್ಣವಾಗಿ ತೊರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
‘‘ನಾನು ಈ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಈ ಹಂತದಲ್ಲಿ ಇದು ನಾನು ತೆಗೆದುಕೊಂಡ ಶ್ರೇಷ್ಠ ನಿರ್ಧಾರ ಎಂಬುದಾಗಿ ನನಗೆ ಅನಿಸಿತು. ನಾನು ಮಸುಕಾಗಿ ಮರೆಯಾಗಲು ಬಯಸುವುದಿಲ್ಲ. ನಾನು ಪರಂಪರೆಯೊಂದನ್ನು ಬಿಟ್ಟು ಹೋಗಲು ಬಯಸುತ್ತೇನೆ. ಅಭಿಮಾನಿಗಳು ‘ಹೌದು, ನೀವು ವರ್ಷಗಳ ಹಿಂದೆಯೇ ನಿವೃತ್ತಿಯಾಗಬೇಕಾಗಿತ್ತು’ ಎಂದು ಹೇಳುವುದಕ್ಕೆ ಮುನ್ನ ಹಾಗೂ ‘ಯಾಕೆ? ನಿಮ್ಮಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ. ನೀವು ಇನ್ನೂ ಸ್ವಲ್ಪ ಸಮಯ ಆಡಬಹುದು’ ಎಂದು ಹೇಳುವಾಗಲೇ ನಿವೃತ್ತಿಯಾಗುವುದು ಉತ್ತಮ’’ ಎಂದು ರಸೆಲ್ ತನ್ನ ವೀಡಿಯೊದಲ್ಲಿ ಹೇಳಿದ್ದಾರೆ.







