ಟೆಸ್ಟ್ ಕ್ರಿಕೆಟ್ನಿಂದ ಆ್ಯಂಜೆಲೊ ಮ್ಯಾಥ್ಯೂಸ್ ನಿವೃತ್ತಿ

ಆ್ಯಂಜೆಲೊ ಮ್ಯಾಥ್ಯೂಸ್ | PC : X \ @AzzamAmeen
ಕೊಲಂಬೊ: ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವುದಾಗಿ 37ರ ಹರೆಯದ ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಆ್ಯಂಜೆಲೊ ಮ್ಯಾಥ್ಯೂಸ್ ಶುಕ್ರವಾರ ಪ್ರಕಟಿಸಿದ್ದಾರೆ.
ಜೂನ್ ನಲ್ಲಿ ಗಾಲೆಯಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ಆಡಲಿದ್ದಾರೆ. ಇದರೊಂದಿಗೆ 17 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆಯಲಿದ್ದಾರೆ.
ಯುವ ಪ್ರತಿಭೆಗಳಿಗೆ ದಾರಿಮಾಡಿಕೊಡಲು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿರುವುದಾಗಿ ಹೇಳಿರುವ ಮ್ಯಾಥ್ಯೂಸ್, ತನ್ನ ದೇಶದ ಏಕದಿನ ಹಾಗೂ ಟಿ20 ಕ್ರಿಕೆಟ್ ತಂಡದಲ್ಲಿ ಸದಾ ಲಭ್ಯ ಇರುತ್ತೇನೆ ಎಂದಿದ್ದಾರೆ.
‘‘ಕೃತಜ್ಞತಾಪೂರ್ವಕ ಹೃದಯ ಹಾಗೂ ಮರೆಯಲಾಗದ ನೆನಪುಗಳೊಂದಿಗೆ ಅಂತರ್ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ನಾನು ವಿದಾಯ ಹೇಳುವ ಸಮಯ ಬಂದಿದೆ. ಜೂನ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ನನ್ನ ದೇಶಕ್ಕಾಗಿ ನನ್ನ ಕೊನೆಯ ಟೆಸ್ಟ್ ಪಂದ್ಯವಾಗಿರುತ್ತದೆ’’ಎಂದು ಮ್ಯಾಥ್ಯೂಸ್. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ಆಯ್ಕ್ಕೆದಾರರೊಂದಿಗೆ ಚರ್ಚಿಸಿದ ನಂತರ ನಾನು ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ. ನನ್ನ ದೇಶಕ್ಕೆ ನನ್ನ ಅಗತ್ಯವಿದ್ದಾಗ, ಅಗತ್ಯವಿದ್ದರೆ ಏಕದಿನ, ಟಿ20 ಕ್ರಿಕೆಟಿಗೆ ಲಭ್ಯವಿರುತ್ತೇನೆ. ಈಗಿನ ಟೆಸ್ಟ್ ತಂಡದಲ್ಲಿ ಪ್ರತಿಭಾನ್ವಿತರಿದ್ದು, ಮುಂದಿನ ಹಾಗೂ ಈಗಿನ ಶ್ರೇಷ್ಟ ಆಟಗಾರರು ಆಡುತ್ತಿದ್ದಾರೆ. ನಮ್ಮ ದೇಶಕ್ಕಾಗಿ ಮಿಂಚಲು ಬಯಸಿರುವ ಯುವ ಆಟಗಾರರಿಗೆ ದಾರಿ ಮಾಡಿಕೊಡಲು ಇದೊಂದು ಉತ್ತಮ ಸಮಯ ಎಂದು ಭಾವಿಸಿದ್ದೇನೆ’’ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.
2009ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ ನಂತರ ಮ್ಯಾಥ್ಯೂಸ್ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 44.62ರ ಸರಾಸರಿಯಲ್ಲಿ ಒಟ್ಟು 8,167 ರನ್ ಗಳಿಸಿದ್ದಾರೆ. ಶ್ರೀಲಂಕಾದ ಟೆಸ್ಟ್ ಇತಿಹಾಸದಲ್ಲಿ ಕುಮಾರ ಸಂಗಕ್ಕರ ಹಾಗೂ ಮಹೇಲ ಜಯವರ್ಧನೆಯ ನಂತರ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ತನ್ನ ಟೆಸ್ಟ್ ವೃತ್ತಿಜೀವನದಲ್ಲಿ 16 ಶತಕಗಳು ಹಾಗೂ 45 ಅರ್ಧಶತಕಗಳನ್ನು ಗಳಿಸಿದ್ದಾರೆ. ಔಟಾಗದೆ 200 ಗರಿಷ್ಠ ಸ್ಕೋರಾಗಿದೆ. ಟೆಸ್ಟ್ ಕ್ರಿಕೆಟಿನಲ್ಲಿ 34 ವಿಕೆಟ್ಗಳನ್ನೂ ಉರುಳಿಸಿದ್ದಾರೆ.
ಮ್ಯಾಥ್ಯೂಸ್ 2013ರಿಂದ 2017ರ ತನಕ ಶ್ರೀಲಂಕಾ ಕ್ರಿಕೆಟ್ ತಂಡದ ಎಲ್ಲ ಮೂರು ಪ್ರಕಾರದ ಕ್ರಿಕೆಟ್ನ ನಾಯಕತ್ವ ವಹಿಸಿದ್ದರು.
ಹಿರಿಯ ಆಲ್ರೌಂಡರ್ ಮ್ಯಾಥ್ಯೂಸ್ ಬಾಂಗ್ಲಾದೇಶ ವಿರುದ್ಧ ಗಾಲೆಯಲ್ಲಿ ಜೂನ್ 17ರಿಂದ 21ರ ತನಕ ಕೊನೆಯ ಟೆಸ್ಟ್ ಪಂದ್ಯ ಆಡಲಿದ್ದಾರೆ.







