ಪಾಕಿಸ್ತಾನದ ವಿರುದ್ಧದ T20 ವಿಶ್ವಕಪ್ ಪಂದ್ಯದ ವೇಳೆ ಕುಲ್ದೀಪ್ ಯಾದವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಾರ್ದಿಕ್ ಪಾಂಡ್ಯ!; ವಿಡಿಯೋ ವೈರಲ್

Screengrab:X/@AdityaRaut85685
ಮುಂಬೈ: ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು 61 ರನ್ ಗಳ ಭರ್ಜರಿ ಜಯ ಸಾಧಿಸಿ ಸೂಪರ್ ಎಂಟರ ಹಂತಕ್ಕೆ ಲಗ್ಗೆ ಇಟ್ಟಿತು. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ ನಡುವೆ ನಡೆದ ವಾಗ್ವಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಚೇಸಿಂಗ್ ನ 18ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಶಾಹೀನ್ ಅಫ್ರಿದಿಗೆ ಬೌಲಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅಫ್ರಿದಿ ಲಾಂಗ್–ಆನ್ ಕಡೆಗೆ ಹೊಡೆದ ಶಾಟ್ ಅನ್ನು ಬೌಂಡರಿ ಸಮೀಪ ನಿಂತಿದ್ದ ಕುಲ್ದೀಪ್ ಯಾದವ್ ಎರಡು ಕೈಗಳಿಂದ ಮುಟ್ಟಿದರೂ ಕ್ಯಾಚ್ ಹಿಡಿಯಲು ವಿಫಲರಾದರು. ಪರಿಣಾಮ ಚೆಂಡು ಸಿಕ್ಸರ್ ಆಯಿತು. ಇದಕ್ಕೂ ಕೆಲ ಕ್ಷಣಗಳ ಮೊದಲು ಇಶಾನ್ ಕಿಶನ್ ಅದೇ ಬ್ಯಾಟರ್ ನಿಂದ ಸ್ಟಂಪ್ಸ್ ಹಿಂದೆ ಒಂದು ಕ್ಯಾಚ್ ಅವಕಾಶ ಕೈಚೆಲ್ಲಿದ್ದರು.
ಈ ವೇಳೆ ಸ್ಪಷ್ಟವಾಗಿ ಅಸಮಾಧಾನಗೊಂಡ ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ಫೀಲ್ಡರ್ ಗಳತ್ತ ಬೆರಳು ತೋರಿಸಿ, “ಇಂತಹ ಅವಕಾಶ ಕೈಚೆಲ್ಲಬಾರದು” ಎಂದು ಕೂಗಿರುವಂತೆ ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. ಕೆಲ ಕ್ಷಣಗಳ ಬಳಿಕ ತಂಡದ ಆಟಗಾರರತ್ತ ತಿರುಗಿ, “ಗಮನ ಕಳೆದುಕೊಳ್ಳಬೇಡಿ” ಎಂಬಂತೆ ಸೂಚನೆ ನೀಡಿದಂತೆಯೂ ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯಪಟ್ಟಿದ್ದಾರೆ.
ಈ ವೈಫಲ್ಯಗಳ ಮಧ್ಯೆ ಪಾಂಡ್ಯ ತಮ್ಮ ಬೌಲಿಂಗ್ ನಲ್ಲೇ ಅದಕ್ಕೆ ಉತ್ತರ ನೀಡಿದರು. ಅದೇ ಓವರ್ ನಲ್ಲಿ ಉಸ್ಮಾನ್ ತಾರಿಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು, ಚೆಂಡು ನೇರವಾಗಿ ಮಿಡಲ್ ಸ್ಟಂಪ್ ಗೆ ಅಪ್ಪಳಿಸಿತು. ಪಾಂಡ್ಯ ಮೂರು ಓವರ್ ಗಳಲ್ಲಿ 16 ರನ್ ನೀಡಿ ಎರಡು ವಿಕೆಟ್ ಕಬಳಿಸಿ ಪಾಕಿಸ್ತಾನವನ್ನು 18 ಓವರ್ ಗಳಲ್ಲಿ ಕೇವಲ 114 ರನ್ಗಳಿಗೆ ಆಲೌಟ್ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು ಭಾರತ ತಂಡ 175/7 ಎಂಬ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಆರಂಭಿಕ ವಿಕೆಟ್ ಬೇಗ ಕಳೆದುಕೊಂಡರೂ ಇಶಾನ್ ಕಿಶನ್ ಅವರ ಅದ್ಭುತ 77 ರನ್ ಗಳ ಇನ್ನಿಂಗ್ಸ್ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿತು. ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಅಮೂಲ್ಯ ರನ್ಗಳನ್ನು ಸೇರಿಸಿ ಮೊತ್ತವನ್ನು ಹೆಚ್ಚಿಸಿದರು.
ಪಾಕಿಸ್ತಾನದ ಚೇಸಿಂಗ್ ಆರಂಭದಲ್ಲೇ ಕುಸಿತ ಕಂಡಿತು. ಜಸ್ಪ್ರೀತ್ ಬುಮ್ರಾ ಪವರ್ ಪ್ಲೇನಲ್ಲಿ ಎರಡು ವಿಕೆಟ್ ಪಡೆದು ಪಾಕಿಸ್ತಾನವನ್ನು 13/3ಕ್ಕೆ ಇಳಿಸಿದರು. ಉಸ್ಮಾನ್ ಖಾನ್ ಅವರು 44 ರನ್ ಗಳಿಸಿದ್ದು ಪಾಕಿಸ್ತಾನದ ಪರ ಅತೀ ಹೆಚ್ಚು ರನ್ ಗಳಿಕೆ. ಉಳಿದ ಬ್ಯಾಟಿಂಗ್ ಕ್ರಮ ಭಾರತದ ವೇಗ ಮತ್ತು ಸ್ಪಿನ್ ದಾಳಿಯನ್ನು ಎದುರಿಸಲು ವಿಫಲವಾಯಿತು. ಸಮಗ್ರ ಪ್ರದರ್ಶನದ ಮೂಲಕ ಭಾರತ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿತು.
What happened between them?
— Aditya SRKian 🚩 (@AdityaRaut85685) February 16, 2026
Suryakumar Yadav & Hardik pandya angry on Kuldeep yadav. #INDvsPAK #HardikPandya #T20WorldCup pic.twitter.com/Z3vHjnjMHC






