ಭಾರತ ವಿರುದ್ಧ ಮತ್ತೊಂದು ಸೋಲು: ಪಾಕ್ ನಾಯಕ ನೀಡಿದ ಕಾರಣ ಏನು?

ನಾಯಕ ಸಲ್ಮಾನ್ ಅಲಿ ಅಘಾPC: x.com/Incognito_qfs
ದುಬೈ: ಭಾರತದ ವಿರುದ್ಧ ಪಾಕಿಸ್ತಾನ ತಂಡ ಸತತವಾಗಿ ಸೋಲುತ್ತಿರುವುದಕ್ಕೆ ಬೌಲಿಂಗ್ ಗೆ ನೆರವು ನೀಡದ ಪಾಕಿಸ್ತಾನದ ಫ್ಲ್ಯಾಟ್ ಪಿಚ್ ಗಳು ಕಾರಣ ಎಂದು ನಾಯಕ ಸಲ್ಮಾನ್ ಅಲಿ ಅಘಾ ದೂರಿದ್ದಾರೆ.
ಒಂದು ವಾರದ ಅವಧಿಯಲ್ಲಿ ಪಾಕಿಸ್ತಾನ ಎರಡು ಬಾರಿ ಭಾರತದ ವಿರುದ್ಧ ಹೀನಾಯವಾಗಿ ಸೋತಿದೆ. ಗುಂಪು ಹಂತದಲ್ಲಿ ಏಳು ವಿಕೆಟ್ ಅಂತರದ ಸೋಲು ಕಂಡಿದ್ದ ಪಾಕಿಸ್ತಾನ ಭಾನುವಾರದ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಸೋಲೊಪ್ಪಿಕೊಂಡಿತು.
ಕಳೆದ ಮೇ ತಿಂಗಳು ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡ ಲಾಹೋರ್ ನ ಗಡ್ಡಾಫಿ ಸ್ಡೇಡಿಯಂನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿ 200ರ ಗಡಿ ದಾಟಿತ್ತು. ಆ ಬಳಿಕ ಆ ಮಟ್ಟ ತಲುಪುವಲ್ಲಿ ವಿಫಲವಾಗಿತ್ತು.
"ನೀವು ಹೇಳುವ ಸರಣಿ (ಪಾಕಿಸ್ತಾನ- ಬಾಂಗ್ಲಾ) ಪಾಕಿಸ್ತಾನದಲ್ಲಿ ನಡೆದದ್ದು. ಆ ಬಳಿಕ ಅಮೆರಿಕದಲ್ಲಿ ನಡೆದ ವೆಸ್ಟ್ಇಂಡೀಸ್ ವಿರುದ್ಧದ ಸರಣಿ, ಶಾರ್ಜಾದಲ್ಲಿ ನಡೆದ ತ್ರಿಕೋಣ ಸರಣಿ ಹಾಗೂ ಇದೀಗ ದುಬೈ ಪಿಚ್ 200 ರನ್ ಗಳನ್ನು ಗಳಿಸಲು ಪೂರಕವಲ್ಲ. ನೀವು ಪಿಚ್ ಸ್ಥಿತಿಯನ್ನು ಗೌರವಿಸಬೇಕು. 200 ರನ್ ಹೊಡೆಯಲು ಇದು ಅವಕಾಶ ನೀಡುವುದಿಲ್ಲ" ಎಂದು ಅಲಿ ಹೇಳಿದರು.
ಸ್ಫೋಟಕ ಆರಂಭದ ಬಳಿಕ ಪಾಕಿಸ್ತಾನ ಸತತ 37 ಎಸೆತಗಳಲ್ಲಿ ಯಾವುದೇ ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಹೊಸದಾಗಿ ಕ್ರೀಸ್ ಗೆ ಬಂದವರಿಗೆ ದುಬೈ ಪಿಚ್ ನೆರವು ನೀಡುತ್ತಿರಲಿಲ್ಲ ಎಂದು ಭಾರತೀಯ ಬ್ಯಾಟ್ಸ್ಮನ್ ಗಳ ಉದಾಹರಣೆಯನ್ನೂ ನೀಡಿದರು. ಇಂಥ ಸವಾಲಿನ ಪಿಚ್ ನಲ್ಲಿ ಬ್ಯಾಟರ್ ಗಳು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು.







