ಗಾಝಾ ವಿರೋಧಿ ಸಂದೇಶ: ಇಸ್ರೇಲ್ ಫುಟ್ಬಾಲಿಗನನ್ನು ಕೈಬಿಟ್ಟ ಜರ್ಮನ್ ಕ್ಲಬ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಆ. 6: ಜರ್ಮನ್ ಫುಟ್ಬಾಲ್ ಕ್ಲಬ್ ಫೋರ್ಚುನ ಡಸಲ್ ಡಾರ್ಫ್ ಇಸ್ರೇಲ್ ಆಟಗಾರ ಶೋನ್ ವೈಸ್ ಮನ್ ರನ್ನು ಕ್ಲಬ್ ಗೆ ಸೇರಿಸಿಕೊಳ್ಳುವುದರಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದೆ. ವೈಸ್ ಮನ್ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆ ಹಾಕಿರುವ ಗಾಝಾ-ವಿರೋಧಿ ಸಂದೇಶಗಳ ಬಗ್ಗೆ ಕ್ಲಬ್ ನ ಅಭಿಮಾನಿಗಳು ಆಕ್ಷೇಪ ಎತ್ತಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಕ್ಲಬ್ ಮಂಗಳವಾರ ತನ್ನ ನಿರ್ಧಾರವನ್ನು ಬಹಿರಂಗಪಡಿಸಿತು. ಆದರೆ, ಅದು ಕಾರಣವನ್ನು ಬಹಿರಂಗಪಡಿಸಲಿಲ್ಲ. ‘‘ನಾವು ಶೋನ್ ವೈಸ್ಮನ್ರ ಬಗ್ಗೆ ತೀವ್ರ ಪರಿಶೀಲನೆ ನಡೆಸಿದ್ದೇವೆ ಮತ್ತು ಅವರನ್ನು ಕ್ಲಬ್ ಗೆ ಸೇರಿಸಿಕೊಳ್ಳದಿರುವ ಅಂತಿಮ ನಿರ್ಧಾರಕ್ಕೆ ಬಂದಿದ್ದೇವೆ’’ ಎಂದು ಹೇಳಿಕೆಯೊಂದರಲ್ಲಿ ಡಸಲ್ ಡಾರ್ಫ್ ತಿಳಿಸಿದೆ.
ಇಸ್ರೇಲ್ ಫುಟ್ಬಾಲ್ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವುದರಿಂದ ಕ್ಲಬ್ ಹಿಂದೆ ಸರಿಯಲು ಅಭಿಮಾನಿಗಳ ಆಕ್ರೋಶವೇ ಕಾರಣ ಎಂದು ಜರ್ಮನ್ ಪತ್ರಿಕೆ ‘ಬಿಲ್ಡ್’ ವರದಿ ಮಾಡಿದೆ. ‘‘ಗಾಝಾವನ್ನು ನಕಾಶೆಯಿಂದ ಅಳಿಸಿಬಿಡುವಂತೆ ಮತ್ತು ಅದರ ಮೇಲೆ 200 ಟನ್ ಬಾಂಬ್ ಗಳನ್ನು ಸುರಿಯುವಂತೆ ಇಸ್ರೇಲ್ ಆಟಗಾರ ವೈಸ್ಮನ್ ಸಾಮಾಜಿಕ ಮಾಧ್ಯಮದ ಮೂಲಕ ಇಸ್ರೇಲ್ ಗೆ ಕರೆ ನೀಡಿದ್ದರು’’ ಎಂದು ವರದಿ ತಿಳಿಸಿದೆ. ಆ ಸಂದೇಶಗಳನ್ನು ಬಳಿಕ ವೈಸ್ ಮನ್ ಅಳಿಸಿಹಾಕಿದ್ದಾರೆ.
*





