ಟೀಮ್ ಇಂಡಿಯಾಗೆ ಅಪೊಲೊ ಟಯರ್ಸ್ ಪ್ರಾಯೋಜಕತ್ವ

ಬಿಸಿಸಿಐ | PC : @BCCI
ಹೊಸದಿಲ್ಲಿ, ಸೆ.16: ಭಾರತೀಯ ಕ್ರಿಕೆಟ್ ತಂಡದ ಹೊಸ ಪ್ರಾಯೋಜಕರಾಗಿರುವ ಅಪೊಲೊ ಟಯರ್ಸ್ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಜೊತೆ ಎರಡೂವರೆ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಡ್ರೀಮ್ 11ರ ಬದಲಿಗೆ ಗುರುಗ್ರಾಮ್ ಮೂಲದ ಟಯರ್ ಕಂಪೆನಿಯು 579 ಕೋ.ರೂ. ಬಿಡ್ ನೊಂದಿಗೆ ಕ್ಯಾನ್ವಾ ಹಾಗೂ ಜೆಕೆ ಸಿಮೆಂಟ್ ಕಂಪೆನಿಗಳನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದೆ.
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಹಾಗೂ ಬಹು ರಾಷ್ಟ್ರೀಯ ಸ್ಪರ್ಧೆಗಳ ಸಂದರ್ಭದಲ್ಲಿ ಪ್ರತೀ ಪಂದ್ಯದ ಮೌಲ್ಯದಲ್ಲಿ ವ್ಯತ್ಯಾಸವಾಗಲಿದೆ.
ಮಾರ್ಚ್ 2028ರ ತನಕ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಭಾರತೀಯ ಪುರುಷರ ಹಾಗೂ ಮಹಿಳಾ ತಂಡಗಳ ಜೆರ್ಸಿಗಳಲ್ಲಿ ಅಪೊಲೊ ಟಯರ್ಸ್ ಲೋಗೊ ಕಾಣಿಸಿಕೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.
ಪ್ರಾಯೋಜಕತ್ವದ ಒಪ್ಪಂದವು 121 ದ್ವಿಪಕ್ಷೀಯ ಪಂದ್ಯಗಳು ಹಾಗೂ ಸುಮಾರು 21 ಐಸಿಸಿ ಪಂದ್ಯಗಳನ್ನು ಒಳಗೊಂಡಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
‘‘ಭಾರತ ಹಾಗೂ ವಿಶ್ವದಾದ್ಯಂತ ಅಪಾರ ಜನಪ್ರಿಯತೆಯನ್ನು ಹೊಂದಿರುವ ಟೀಮ್ ಇಂಡಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಲು ನಮಗೆ ಹೆಮ್ಮೆಯಾಗುತ್ತಿದೆ. ಈ ಪಾಲುದಾರಿಕೆಯು ರಾಷ್ಟ್ರೀಯ ಹೆಮ್ಮೆ, ಗ್ರಾಹಕರ ನಂಬಿಕೆಯನ್ನು ಬಲಪಡಿಸುತ್ತದೆ. ಭಾರತೀಯ ಕ್ರೀಡೆಯನ್ನು ಉನ್ನತ ಮಟ್ಟದಲ್ಲಿ ಬೆಂಬಲಿಸುವುದು ಹಾಗೂ ವಿಶ್ವದಾದ್ಯಂತ ಅಭಿಮಾನಿಗಳಿಗೆ ಮರೆಯಲಾಗದ ಕ್ಷಣ ಸೃಷ್ಟಿಸುವುದು ನಮ್ಮ ಗುರಿಯಾಗಿದೆ’’ ಎಂದು ಅಪೊಲೊ ಟಯರ್ಸ್ ಲಿಮಿಟೆಡ್ನ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕನ್ವರ್ ಹೇಳಿದ್ದಾರೆ.
ಹಣ ಆಧಾರಿತ ಆನ್ ಲೈನ್ ಗೇಮ್ ಗಳನ್ನು ಅಪರಾಧೀಕರಿಸುವ ಕಾನೂನನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕರಿಸಿದ ನಂತರ ಡ್ರೀಮ್-11 ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು ರದ್ದುಪಡಿಸಲಾಯಿತು. ಹೊಸ ಪ್ರಾಯೋಜಕರಿಗಾಗಿ ಬಿಸಿಸಿಐ ಟೆಂಡರ್ ಗಳನ್ನು ಕರೆದಿತ್ತು.
ಡ್ರೀಮ್ 11 ಪ್ರಾಯೋಜಕತ್ವ ರದ್ದಾದ ಕಾರಣ ಭಾರತೀಯ ತಂಡವು ಯುಎಇನಲ್ಲಿ ನಡೆಯುತ್ತಿರುವ ಏಶ್ಯ ಕಪ್ನಲ್ಲಿ ಜೆರ್ಸಿ ಪ್ರಾಯೋಜಕರಿಲ್ಲದೆ ಭಾಗವಹಿಸಬೇಕಾಯಿತು.
ಮೂಲಗಳ ಪ್ರಕಾರ ಅಕ್ಟೋಬರ್ 2ರಿಂದ ವೆಸ್ಟ್ಇಂಡೀಸ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಪೊಲೊ ಟಯರ್ಸ್ ಹೊಸ ಪ್ರಾಯೋಜಕರಾಗಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದೆ.







