ಕೌಂಟಿ ಚಾಂಪಿಯನ್ ಶಿಪ್ ಗೆ ಕಾಲಿಟ್ಟ ಆಕಿಬ್ ನಬಿ

ಆಕಿಬ್ ನಬಿ |Photo Credit : ANI
ಲಂಡನ್, ಸೆ. 2: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಆಕಿಬ್ ನಬಿ ಬುಧವಾರ ಸರ್ರೆ ತಂಡದ ಪರವಾಗಿ ಆಡುವ ಮೂಲಕ ಕೌಂಟಿ ಚಾಂಪಿಯನ್ ಶಿಪ್ ಗೆ ಕಾಲಿಟ್ಟಿದ್ದಾರೆ.
29ರ ವಯಸ್ಸಿನ ನಬಿ ಯಾರ್ಕ್ ಶೈರ್ ವಿರುದ್ಧ ದಿ ಓವಲ್ನಲ್ಲಿ ನಡೆದಿದ್ದ ಡಿವಿಜನ್ ಒಂದರಲ್ಲಿ ಸರ್ರೆ ತಂಡದ ಆಡುವ 11ರ ಬಳಗಕ್ಕೆ ಆಯ್ಕೆಯಾಗಿದ್ದಾರೆ. ಸಸೆಕ್ಸ್ ಹಾಗೂ ಗ್ಲಾಮೊರ್ಗನ್ ತಂಡಗಳ ವಿರುದ್ಧದ ಪಂದ್ಯಕ್ಕೂ ನಬಿ ಲಭ್ಯವಿರಲಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ನಬಿ ಸರ್ರೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ರಣಜಿಯಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಪ್ರತಿನಿಧಿಸಿರುವ ನಬಿ 12.56ರ ಸರಾಸರಿಯಲ್ಲಿ ಒಟ್ಟು 60 ವಿಕೆಟ್ಗಳನ್ನು ಪಡೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ನಬಿ ಅವರು ಜಮ್ಮು-ಕಾಶ್ಮೀರ ತಂಡ ತನ್ನ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರಣಜಿ ಪ್ರದರ್ಶನದ ಮೂಲಕ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದರು. ಅಂತರರಾಷ್ಟ್ರೀಯ ಕ್ರಿಕೆಟಿಗೆ ಕಾಲಿಡದಿದ್ದರೂ ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಆಡುವ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ ನಬಿ ನವೆಂಬರ್ ನಲ್ಲಿ ಭಾರತ ತಂಡದ ನ್ಯೂಝಿಲ್ಯಾಂಡ್ ಟೆಸ್ಟ್ ಪ್ರವಾಸಕ್ಕೂ ಮೊದಲು ಇಂಗ್ಲೆಂಡ್ ವಾತಾವರಣದ ಅನುಭವ ಪಡೆಯಲು ಇದು ಉತ್ತಮ ಅವಕಾಶವಾಗಿದೆ.




