ಗಾಯದ ಹೊರತಾಗಿಯೂ ಇಂಗ್ಲೆಂಡ್ ಟಿ-20 ವಿಶ್ವಕಪ್ ತಂಡದಲ್ಲಿ ಆರ್ಚರ್ ಗೆ ಸ್ಥಾನ

ಜೋಫ್ರಾ ಆರ್ಚರ್ | Photo Credit : PTI
ಲಂಡನ್, ಡಿ.30: ಗಾಯದ ಸಮಸ್ಯೆಯಿಂದಾಗಿ ಆ್ಯಶಸ್ ಟೆಸ್ಟ್ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ಹೊರತಾಗಿಯೂ ವೇಗದ ಬೌಲರ್ ಜೋಫ್ರಾ ಆರ್ಚರ್ಗೆ ಇಂಗ್ಲೆಂಡ್ ತಂಡವು ಟಿ-20 ವಿಶ್ವಕಪ್ ನ ಪ್ರಾಥಮಿಕ ತಂಡದಲ್ಲಿ ಸ್ಥಾನ ಕಲ್ಪಿಸಿದೆ.
ಇಂಗ್ಲೆಂಡ್ ತಂಡವು ಶ್ರೀಲಂಕಾ ಪ್ರವಾಸ ಹಾಗೂ ಭಾರತ ಹಾಗೂ ಶ್ರೀಲಂಕಾದಲ್ಲಿ ಫೆಬ್ರವರಿ 7ರಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಮೆಂಟ್ ಗೆ ತಂಡಗಳನ್ನು ಮಂಗಳವಾರ ಪ್ರಕಟಿಸುವ ವೇಳೆ ಈ ಘೋಷಣೆ ಮಾಡಿದೆ.
ಈ ತಿಂಗಳಾರಂಭದಲ್ಲಿ ಅಡಿಲೇಡ್ ನಲ್ಲಿ ನಡೆದಿದ್ದ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯದ ವೇಳೆ ಆರ್ಚರ್ಗೆ ಗಾಯವಾಗಿತ್ತು. ತನ್ನ ಚೇತರಿಕೆಯ ಯೋಜನೆಯ ಭಾಗವಾಗಿ ಶ್ರೀಲಂಕಾ ಪ್ರವಾಸದಲ್ಲಿ ಇಂಗ್ಲೆಂಡ್ ಆಡಲಿರುವ ಅಭ್ಯಾಸ ಪಂದ್ಯಗಳಿಂದ ವಂಚಿತರಾಗಲಿದ್ದಾರೆ.
ಶ್ರೀಲಂಕಾ ಪ್ರವಾಸದ ವೇಳೆ ಇಂಗ್ಲೆಂಡ್ ತಂಡವು ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಏಕದಿನ ಸರಣಿಯು ಜನವರಿ 22ರಂದು ಆರಂಭವಾಗಲಿದೆ.
ಶ್ರೀಲಂಕಾ ಪ್ರವಾಸಕ್ಕೆ ಆರ್ಚರ್ ಬದಲಿಗೆ ವೇಗದ ಬೌಲರ್ ಬ್ರೆಂಡನ್ ಕಾರ್ಸ್ರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಸಮಿತಿಯು 15 ಸದಸ್ಯರ ತಾತ್ಕಾಲಿಕ ವಿಶ್ವಕಪ್ ತಂಡದಲ್ಲಿ ಆರ್ಚರ್ಗೆ ಸ್ಥಾನ ನೀಡಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ತಂಡವನ್ನು ಹ್ಯಾರಿ ಬ್ರೂಕ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ವೇಗದ ಬೌಲರ್ ಜೋಶ್ ಟೊಂಗ್ ಶ್ರೀಲಂಕಾದ ಟಿ-20 ಹಾಗೂ ವಿಶ್ವಕಪ್ ತಂಡಗಳಲ್ಲಿ ಸ್ಥಾನ ಪಡೆಯುವ ಮೂಲಕ ಇದೇ ಮೊದಲ ಬಾರಿ ಟಿ-20 ಕ್ರಿಕೆಟಿಗೆ ಕರೆ ಪಡೆದಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್(ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜಾಕ್ಸ್, ಜೆಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟೊಂಗ್, ಲ್ಯೂಕ್ ವುಡ್, ಬ್ರೆಂಡನ್ ಕಾರ್ಸ್.
ವಿಶ್ವಕಪ್ಗೆ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್(ನಾಯಕ), ರೆಹಾನ್ ಅಹ್ಮದ್, ಟಾಮ್ ಬ್ಯಾಂಟನ್, ಜೇಕಬ್ ಬೆಥೆಲ್, ಜೋಸ್ ಬಟ್ಲರ್, ಬ್ರೆಂಡನ್ ಕಾರ್ಸ್, ಝ್ಯೆಕ್ ಕ್ರಾಲಿ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜಾಕ್ಸ್, ಜೆಮೀ ಓವರ್ಟನ್, ಆದಿಲ್ ರಶೀದ್, ಜೋ ರೂಟ್, ಲ್ಯೂಕ್ ವುಡ್.







