ನಾಲ್ಕು ವರ್ಷಗಳ ನಂತರ ಟೆಸ್ಟ್ ಕ್ರಿಕೆಟಿಗೆ ಆರ್ಚರ್ ಪುನರಾಗಮನ

ಜೋಫ್ರಾ ಆರ್ಚರ್ | PC : PTI
ಲಾರ್ಡ್ಸ್: ಹಿರಿಯ ವೇಗದ ಬೌಲರ್ ಜೋಫ್ರಾ ಆರ್ಚರ್ ನಾಲ್ಕು ವರ್ಷಗಳ ನಂತರ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ ತಂಡವು ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ತನ್ನ ಆಡುವ 11ರ ಬಳಗವನ್ನು ಬುಧವಾರ ಪ್ರಕಟಿಸಿದ್ದು, ಆರ್ಚರ್ ಅವರು ಜೋಶುವಾ ಟಂಗ್ ಬದಲಿಗೆ ಆಡುವ 11ರ ಬಳಗಕ್ಕೆ ಪ್ರವೇಶಿಸಿದ್ದಾರೆ.
ಇತ್ತೀಚೆಗೆ ಸಸೆಕ್ಸ್ ಪರ ಒಂದು ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದ ಆರ್ಚರ್ 18 ಓವರ್ ಗಳ ಬೌಲಿಂಗ್ ಮಾಡಿದ್ದರು. ಇದೀಗ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆರ್ಚರ್ 2019 ಹಾಗೂ 2021ರ ನಡುವೆ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ 31.04ರ ಸರಾಸರಿಯಲ್ಲಿ ಒಟ್ಟು 42 ವಿಕೆಟ್ ಗಳನ್ನು ಪಡೆದಿದ್ದಾರೆ. ನಿರಂತರವಾಗಿ ಕಾಡಿದ ಮೊಣಕೈ ಹಾಗೂ ಬೆನ್ನಿನ ಗಾಯದಿಂದಾಗಿ ಅವರು 18 ತಿಂಗಳುಗಳ ಕಾಲ ಸಕ್ರಿಯ ಕ್ರಿಕೆಟ್ನಿಂದ ದೂರ ಉಳಿದಿದ್ದರು.
ಆರ್ಚರ್ 2021ರ ನಂತರ ತನ್ನ ಮೊದಲ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಆರ್ಚರ್ ರಿಂದ ಇಂಗ್ಲೆಂಡ್ ತಂಡವು ಹೆಚ್ಚು ನಿರೀಕ್ಷಿಸಬಾರದು ಎಂದು ಮಾಜಿ ನಾಯಕ ಮೈಕಲ್ ಅಥರ್ಟನ್ ಎಚ್ಚರಿಸಿದ್ದಾರೆ.
ಅಟ್ಕಿನ್ಸನ್ ಅವರು ಎಜ್ಬಾಸ್ಟನ್ ಟೆಸ್ಟ್ ನಂತರ ಟೆಸ್ಟ್ ತಂಡವನ್ನು ಸೇರಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿಲ್ಲ.
ಬುಧವಾರ ಬೆಳಗ್ಗೆ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದ ಮಾರ್ಕ್ ವುಡ್ ಕೂಡ 5ನೇ ಟೆಸ್ಟ್ ಪಂದ್ಯದ ವೇಳೆಗೆ ತನ್ನ ಮೊಣಕಾಲಿನ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ಆಡುವ ಗುರಿ ಇಟ್ಟುಕೊಂಡಿದ್ದಾರೆ.







