ಆರ್ಚರಿ ವಿಶ್ವಕಪ್: ಫೈನಲ್ ಗೆ ತಲುಪಿದ ಭಾರತದ ಕಾಂಪೌಂಡ್ ಬಿಲ್ಲುಗಾರರು, ಎರಡು ಪದಕ ಖಚಿತ
Photo: twitter \ @scroll_in
ಹೊಸದಿಲ್ಲಿ: ತನ್ನ ಗೆಲುವಿನ ಓಟ ಮುಂದುವರಿಸಿದ ಭಾರತದ ಕಾಂಪೌಂಡ್ ಆರ್ಚರ್ ಗಳು ನಾಲ್ಕನೇ ಹಂತದ ಆರ್ಚರಿ ವಿಶ್ವಕಪ್ ನಲ್ಲಿ ಪುರುಷರ ಹಾಗೂ ಮಹಿಳೆಯರ ಟೀಮ್ ಇವೆಂಟ್ ಗಳಲ್ಲಿ ಫೈನಲ್ ಗೆ ತಲುಪಿ ಎರಡು ಪದಕಗಳನ್ನು ಖಚಿತಪಡಿಸಿದರು.
ಇತ್ತೀಚೆಗೆ ವಿಶ್ವ ಚಾಂಪಿಯನ್ ಕಿರೀಟ ಧರಿಸಿದ್ದ ಒಜಾಸ್ ದೇವೊತಾಲೆ ಬಾಣವನ್ನು ಕೇಂದ್ರಕ್ಕೆ (ಎಕ್ಸ್)ಸಮೀಪ ತಲುಪಿಸುವ ಮೂಲಕ ಕಾಂಪೌಂಡ್ ಪುರುಷರ ಟೀಮ್ ಸೆಮಿ ಫೈನಲ್ ನಲ್ಲಿ ಭಾರತವು ಕೊರಿಯಾ ವಿರುದ್ಧ ಶೂಟ್ ಆಫ್(30-30)ನಿಂದ ಹೊರ ಬಂದು ಗೆಲುವು ದಾಖಲಿಸಲು ನೆರವಾದರು.
ಭಾರತದ ಪುರುಷರ ತಂಡವು ಚಿನ್ನದ ಪದಕಕ್ಕಾಗಿ ನಡೆಯುವ ಹಣಾಹಣಿಯಲ್ಲಿ ಅಮೆರಿಕವನ್ನು ಎದುರಿಸಲಿದೆ.
ಎರಡು ವಾರಗಳ ಹಿಂದೆಯಷ್ಟೇ ಬರ್ಲಿನ್ ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತದ ಮಹಿಳೆಯರ ಕಾಂಪೌಂಡ್ ತಂಡ ಹಿನ್ನಡೆಯಿಂದ ಚೇತರಿಸಿಕೊಂಡು ಬ್ರಿಟನ್ ತಂಡವನ್ನು 234-233 ಅಂತರದಿಂದ ಮಣಿಸಿತು.
ಅಗ್ರ ಶ್ರೇಯಾಂಕದ ಭಾರತದ ಬಿಲ್ಲುಗಾರ್ತಿಯರಾದ ಜ್ಯೋತಿ ಸುರೇಖಾ, ಅದಿತಿ ಸ್ವಾಮಿ ಹಾಗೂ ಪರ್ನೀತ್ ಕೌರ್ ಫೈನಲ್ನಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದ್ದಾರೆ.
ಒಜಾಸ್, ಪ್ರಥಮೇಶ್ ಜಾವ್ಕರ್ ಹಾಗೂ ಅಭಿಷೇಕ್ ವರ್ಮಾ ಅವರನ್ನೊಳಗೊಂಡ ಪುರುಷರ ತಂಡವು ಎರಡು ಅಂಕದಿಂದ ಮುಂದಿತ್ತು. ಯಾಂಗೀ, ಕಿಮ್ ಜಾಂಗ್ಹೊ ಹಾಗೂ ಯಾಂಗ್ ಜೇವೊನ್ರನ್ನು ಒಳಗೊಂಡ ಕೊರಿಯಾ ತಂಡ ನಾಲ್ಕನೇ ಸುತ್ತಿನ ಅಂತ್ಯದಲ್ಲಿ ಸ್ಕೋರನ್ನು 235-235 ಅಂತರದಿಂದ ಸಮಬಲಗೊಳಿಸಿತು.
ಶೂಟ್ ಆಫ್ ನಲ್ಲೂ 30-30ರಿಂದ ಸಮಬಲಗೊಂಡಿತ್ತು. ಒಜಾಸ್ ಕೊನೆಯ ಬಾಣದಿಂದ ಭಾರತಕ್ಕೆ ಗೆಲುವು ತಂದುಕೊಟ್ಟರು.
ಮಹಿಳೆಯರ ಸೆಮಿ ಫೈನಲ್ ನಲ್ಲಿ ಭಾರತವು 59-60ರಿಂದ ಹಿನ್ನಡೆಯಲ್ಲಿತ್ತು. 2ನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿತು. ಬ್ರಿಟನ್ ಮತ್ತೊಮ್ಮೆ 176-175 ರಿಂದ ಮುನ್ನಡೆ ಪಡೆಯಿತು. ಆದರೆ 4ನೇ ಸುತ್ತಿನ ಅಂತ್ಯದಲ್ಲಿ ಭಾರತದ ತ್ರಿವಳಿ ಬಿಲ್ಲುಗಾರ್ತಿಯರು 60ರಲ್ಲಿ 59 ಅಂಕ ಗಳಿಸಿ ಫೈನಲ್ನಲ್ಲಿ ತಮ್ಮ ಸ್ಥಾನ ಖಚಿತಪಡಿಸಿದರು