ಆರ್ಚರಿ ವಿಶ್ವಕಪ್ ಸ್ಟೇಜ್-2 | ಮಧುರಾ ಧಮನ್ಗಾಂವ್ಕರ್ಗೆ ಚಿನ್ನದ ಪದಕ

PC : olympics.com
ಹೊಸದಿಲ್ಲಿ: ಪ್ರಬಲ ಪ್ರತಿ ಹೋರಾಟ ನೀಡಿದ ಮಧುರಾ ಧಮನ್ಗಾಂವ್ಕರ್ ವಿಶ್ವಕಪ್ನ ವೈಯಕ್ತಿಕ ವಿಭಾಗದಲ್ಲಿ ತನ್ನ ಚೊಚ್ಚಲ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಮೂಲಕ 2ನೇ ಹಂತದ ಆರ್ಚರಿ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಭಾರತವು 2 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ಜಯಿಸಿ ಗಮನಾರ್ಹ ಪ್ರದರ್ಶನ ನೀಡಿದೆ.
ಮೂರು ವರ್ಷಗಳ ಅನುಪಸ್ಥಿತಿಯಿಂದಾಗಿ ರ್ಯಾಂಕಿಂಗ್ರಹಿತರಾಗಿದ್ದ ಮಧುರಾ ಅವರು ಶನಿವಾರ ನಡೆದ ವೈಯಕ್ತಿಕ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಅಮೆರಿಕದ ಕಾರ್ಸನ್ ಕ್ರಾಹೆ ಅವರನ್ನು 139-138 ಅಂಕದಿಂದ ರೋಚಕವಾಗಿ ಮಣಿಸಿ ಅಗ್ರ ಸ್ಥಾನ ಪಡೆದರು.
24ರ ಹರೆಯದ ಮಹಾರಾಷ್ಟ್ರದ ಅಮರಾವತಿಯ ಮಧುರಾ ಅವರು ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿ ಒಟ್ಟು ಮೂರು ಪದಕಗಳನ್ನು ತನ್ನದಾಗಿಸಿಕೊಂಡರು.
ಮಧುರಾ -ಕಾರ್ಸನ್ ನಡುವಿನ ಫೈನಲ್ ಸ್ಪರ್ಧೆಯು ತೀವ್ರ ಪೈಪೋಟಿಯಿಂದ ಕೂಡಿದ್ದು, ಮೊದಲ ಸುತ್ತಿನಲ್ಲಿ ಮಧುರಾ ಮೇಲುಗೈ ಸಾಧಿಸಿದರು. ಆದರೆ ಈ ಹಿಂದೆ ವಿಶ್ವಕಪ್ನಲ್ಲಿ ಟೀಮ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿರುವ 52ನೇ ರ್ಯಾಂಕಿನ ಕಾರ್ಸನ್ 2ನೇ ಹಾಗೂ ಮೂರನೇ ಸುತ್ತಿನಲ್ಲಿ ಪ್ರತಿರೋಧ ಒಡ್ಡಿದರು. ಏಕಾಗ್ರತೆಯಿಂದ ಆಡಿದ ಮಧುರಾ 4ನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಸಮಬಲ ಸಾಧಿಸಿದರು. ನಿರ್ಣಾಯಕ ಕೊನೆಯ ಸುತ್ತಿನಲ್ಲಿ ಕಾರ್ಸನ್ ಹಾಗೂ ಮಧುರಾ ನಡುವೆ ತೀವ್ರ ಹೋರಾಟ ಕಂಡುಬಂದಿದ್ದು ಅಂತಿಮವಾಗಿ ಮಧುರಾ ಕೇವಲ 1 ಅಂಕದಿಂದ ಜಯಶಾಲಿಯಾದರು.
ಅಭಿಷೇಕ್ ವರ್ಮಾ, ಓಜಸ್ ದೇವ್ತಾಲೆ ಹಾಗೂ ರಿಷಭ್ ಯಾದವ್ ಅವರನ್ನೊಳಗೊಂಡ ಭಾರತ ತಂಡವು ಪುರುಷರ ಟೀಮ್ ಸ್ಪರ್ಧೆಯ ಫೈನಲ್ನಲ್ಲಿ ಮೆಕ್ಸಿಕೊ ತಂಡವನ್ನು 232-228 ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿತು.
ಅಗ್ರ ಶ್ರೇಯಾಂಕದ ಭಾರತೀಯ ತಂಡವು ಮೆಕ್ಸಿಕೊ ವಿರುದ್ಧ 59-57ರಿಂದ ಮುನ್ನಡೆ ಸಾಧಿಸಿತು.
22ರ ಹರೆಯದ ರಿಷಭ್ ಯಾದವ್ ದಕ್ಷಿಣ ಆಫ್ರಿಕಾದ ಕಿಮ್ ಜಾಂಗ್ಹೊರನ್ನು 145-145 ಅಂತರದಿಂದ ಸಮಬಲ ಸಾಧಿಸಿ ಶೂಟ್ಆಫ್ನಲ್ಲಿ ಕಂಚಿನ ಪದಕ ಜಯಿಸಿದರು. ಈ ಮೂಲಕ ಯಾದವ್ ಮೊದಲ ಬಾರಿ ವೈಯಕ್ತಿಕ ವಿಶ್ವಕಪ್ ಪದಕ ಜಯಿಸಿದ್ದಾರೆ.
ಮಹಿಳೆಯರ ಟೀಮ್ ಫೈನಲ್ನಲ್ಲಿ ಜ್ಯೋತಿ ಸುರೇಖಾ ಹಾಗೂ ಚಿಕಿಥಾ ತನಿಪರ್ಥಿ ಅವರೊಂದಿಗೆ ಆಡಿದ ಮಧುರಾ ಅವರು ಮೆಕ್ಸಿಕೊ ವಿರುದ್ಧ 221-234 ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.
ಮಧುರಾ ಅವರು ಅಭಿಷೇಕ್ ವರ್ಮಾ ಜೊತೆಗೂಡಿ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಮಲೇಶ್ಯದ ವಿರುದ್ಧ 144-142 ಅಂತರದಿಂದ ಜಯಶಾಲಿಯಾಗಿ ಕಂಚಿನ ಪದಕವನ್ನು ಜಯಿಸಿದರು.
ಈ ಸಾಧನೆಯ ಮೂಲಕ ಭಾರತವು ಕಾಂಪೌಂಡ್ ಆರ್ಚರಿಯಲ್ಲಿ ಜಾಗತಿಕವಾಗಿ ಶಕ್ತಿಶಾಲಿಯಾಗಿದೆ.
2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಕಾಂಪೌಂಡ್ ಆರ್ಚರಿ ಸೇರ್ಪಡೆಯಾಗಿದ್ದು, ಮಿಕ್ಸೆಡ್ ಟೀಮ್ ಸ್ಪರ್ಧೆಯ ಮೂಲಕ ಭಾರತವು ಒಲಿಂಪಿಕ್ಸ್ನಲ್ಲಿ ಆರ್ಚರಿಯಲ್ಲಿ ಚೊಚ್ಚಲ ಪದಕ ಗೆಲ್ಲುವ ಗುರಿ ಇಟ್ಟುಕೊಂಡಿದೆ.
ರಿಕರ್ವ್ ಸ್ಪರ್ಧಾವಳಿಯು ರವಿವಾರ ಸ್ಟೇಜ್-2ರ ಮೂಲಕ ಮುಕ್ತಾಯವಾಗಲಿದೆ. ಭಾರತವು ಇದರಲ್ಲಿ ಮೂರು ಹೆಚ್ಚುವರಿ ಪದಕಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತೀಯ ಪುರುಷರ ತಂಡವು ಕಂಚಿನ ಪಂದ್ಯಕ್ಕಾಗಿ ಸ್ಪರ್ಧಿಸಲಿದ್ದು, ಪಾರ್ಥ ಸಾಲುಂಕೆ ಹಾಗೂ ದೀಪಿಕಾ ಕುಮಾರಿ ಸೆಮಿ ಫೈನಲ್ನಲ್ಲಿ ಸೆಣಸಾಡಲಿದ್ದಾರೆ.