ಬಿಲ್ಗಾರಿಕೆ ವಿಶ್ವಕಪ್ ಹಂತ 2 ಪಂದ್ಯಾವಳಿ: ಭಾರತೀಯ ಮಹಿಳಾ ರಿಕರ್ವ್ ತಂಡಕ್ಕೆ ಚಿನ್ನ

Photo Credit: World Archery
ಶಾಂಘೈ, ಮೇ 10: ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಬಿಲ್ಗಾರಿಕೆ ವಿಶ್ವಕಪ್ ಹಂತ 2 ಪಂದ್ಯಾವಳಿಯಲ್ಲಿ, ರವಿವಾರ ಮಹಿಳಾ ರಿಕರ್ವ್ ತಂಡ ವಿಭಾಗದ ಫೈನಲ್ನಲ್ಲಿ ಭಾರತವು ಆತಿಥೇಯ ಚೀನಾವನ್ನು ಶೂಟ್-ಆಫ್ನಲ್ಲಿ ಸೋಲಿಸಿ ಚಿನ್ನ ಗೆದ್ದಿದೆ.
ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಕುಮ್ಕುಮ್ ಮೊಹೊದ್ರನ್ನು ಒಳಗೊಂಡ ಭಾರತೀಯ ತಂಡವು, ಒತ್ತಡದ ಶೂಟ್-ಆಫ್ನಲ್ಲಿ ದಿಟ್ಟತನ ಪ್ರದರ್ಶಿಸಿತು.
ಫಲಿತಾಂಶದಲ್ಲಿ ಏರುಪೇರು ಕಂಡ ಶೂಟ್-ಆಫ್ನಲ್ಲಿ, ಭಾರತೀಯ ಮಹಿಳೆಯರು ಒತ್ತಡವನ್ನು ಮೀರಿ ನಿಂತು ಎದುರಾಳಿಯನ್ನು 5-4 (28-26) ಸೆಟ್ಗಳಿಂದ ಮಣಿಸಿದರು. ನಾಲ್ಕು ಸೆಟ್ಗಳ ನಿಯಮಿತ ಸ್ಪರ್ಧೆ 4-4ರಿಂದ ಸಮಬಲಗೊಂಡ ಬಳಿಕ ಶೂಟ್ ಆಫ್ ಅನಿವಾರ್ಯವಾಯಿತು.
2021ರ ಬಳಿಕ, ವಿಶ್ವಕಪ್ನಲ್ಲಿ ಮಹಿಳೆಯರ ತಂಡ ವಿಭಾಗದಲ್ಲಿ ಭಾರತ ಚಿನ್ನ ಗೆಲ್ಲುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಇದಕ್ಕೂ ಮೊದಲು, ಸೆಮಿಫೈನಲ್ನಲ್ಲಿ ಭಾರತೀಯ ಮಹಿಳೆಯರು ದಾಖಲೆಯ 10 ಬಾರಿಯ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯವನ್ನು ಹಿಮ್ಮೆಟ್ಟಿಸಿ ಫೈನಲ್ಗೆ ನುಗ್ಗಿದ್ದರು.
ದೀಪಿಕಾ 2010ರ ಬಳಿಕ, ವಿಶ್ವಕಪ್ನಲ್ಲಿ ಏಳು ತಂಡ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು 2021ರಲ್ಲಿ ಗ್ವಾಟೆಮಾಲಾ ಸಿಟಿ ಮತ್ತು ಪ್ಯಾರಿಸ್ನಲ್ಲಿ ವಿಶ್ವಕಪ್ ಚಿನ್ನದ ಪದಕಗಳನ್ನು ಗೆದ್ದ ಭಾರತೀಯ ತಂಡದ ಸದಸ್ಯೆಯೂ ಆಗಿದ್ದಾರೆ.
ಶಾಂಘೈ ವಿಶ್ವಕಪ್ನಲ್ಲಿ ಭಾರತ ಈಗಾಗಲೇ ಎರಡು ಪದಕಗಳನ್ನು ಗೆದ್ದಿದೆ. ಶನಿವಾರ ಕಾಂಪೌಂಡ್ ವಿಭಾಗದಲ್ಲಿ ಸಾಹಿಲ್ ಜಾಧವ್ ಕಂಚಿನ ಪದಕ ಗೆದ್ದಿದ್ದರು.






