ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ಅರ್ಜೆಂಟೀನದ ನಿಕೊಲಸ್ ಒಟಾಮೆಂಡಿ ನಿವೃತ್ತಿ

ನಿಕೊಲಸ್ ಒಟಾಮೆಂಡಿ | Photo Credit : AP
ಹೊಸದಿಲ್ಲಿ, ಜು.24: ಅರ್ಜೆಂಟೀನದ ಡಿಫೆಂಡರ್ ನಿಕೊಲಸ್ ಒಟಾಮೆಂಡಿ ಅಂತರ್ರಾಷ್ಟ್ರೀಯ ಫುಟ್ಬಾಲ್ನಿಂದ ತನ್ನ ನಿವೃತ್ತಿ ಪ್ರಕಟಿಸಿದರು. ಈ ಮೂಲಕ 17 ವರ್ಷಗಳ ತನ್ನ ವೃತ್ತಿಜೀವನಕ್ಕೆ ತೆರೆ ಎಳೆದರು.
ಒಟಾಮೆಂಡಿ 2022ರಲ್ಲಿ ವಿಶ್ವಕಪ್ ಹಾಗೂ 2021 ಹಾಗೂ 2024ರಲ್ಲಿ ಎರಡು ಬಾರಿ ಕೋಪಾ ಅಮೆರಿಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾಲ್ಕು ವಿಶ್ವಕಪ್ ಟೂರ್ನಿಗಳಲ್ಲಿ ಅರ್ಜೆಂಟೀನವನ್ನು ಪ್ರತಿನಿಧಿಸಿದ್ದಾರೆ.
38ರ ವಯಸ್ಸಿನ ಒಟಾಮೆಂಡಿ ತನ್ನ ದೇಶದ ಪರ 139 ಪಂದ್ಯಗಳನ್ನು ಆಡಿದ್ದಾರೆ. ಅಮೆರಿಕದಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದ ಅರ್ಜೆಂಟೀನ ತಂಡದಲ್ಲಿದ್ದರು. ಹಾಲಿ ಚಾಂಪಿಯನ್ ಆಗಿದ್ದ ಅರ್ಜೆಂಟೀನ ತಂಡವು ಸ್ಪೇನ್ ವಿರುದ್ಧ ಫೈನಲ್ ಪಂದ್ಯದ ಹೆಚ್ಚುವರಿ ಸಮಯದಲ್ಲಿ 0-1 ಅಂತರದಿಂದ ಸೋತಿತ್ತು. ಒಟಾಮೆಂಡಿ ಫೈನಲ್ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಇಳಿದಿದ್ದರು. ಇದು ಅರ್ಜೆಂಟೀನದ ಪರ ಅವರ ಕೊನೆಯ ಪಂದ್ಯವಾಗಿದೆ.
‘‘ನಾನು ಇಂದು ನನ್ನ ವೃತ್ತಿಜೀವನದ ಅತ್ಯಂತ ಕಠಿಣ ಶಬ್ದಗಳನ್ನು ಬರೆಯುತ್ತಿರುವೆ’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಒಟಾಮೆಂಡಿ ಬರೆದಿದ್ದಾರೆ.
‘‘ವಿಶ್ವಕಪ್ ಫೈನಲ್ ನನ್ನ ಕೊನೆಯ ಪಂದ್ಯವಾಗಿದೆ. ನಾವು ಬಯಸಿದಂತಹ ಫಲಿತಾಂಶ ಬಂದಿಲ್ಲ, ಆದರೆ ನಾನು ತಲೆ ಎತ್ತಿಕೊಂಡು ತಂಡವನ್ನು ತೊರೆಯತ್ತಿರುವೆ. ಕೊನೆಯ ಕ್ಷಣದ ತನಕ ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದೆ ಎಂದು ನನಗೆ ಗೊತ್ತಿದೆ. ವಿಶ್ವ ಚಾಂಪಿಯನ್ ಆಗುವ ಕನಸನ್ನು ಪೂರ್ಣಗೊಳಿಸಿದ ಅರ್ಜೆಂಟೀನಕ್ಕೆ ಧನ್ಯವಾದ’’ ಎಂದು ಒಟಾಮೆಂಡಿ ಹೇಳಿದ್ದಾರೆ.
ಇತ್ತೀಚೆಗೆ ಯುರೋಪ್ನೊಂದಿಗೆ 16 ವರ್ಷಗಳ ಒಡನಾಟವನ್ನು ಕಡಿದುಕೊಂಡಿದ್ದ ಒಟಾಮೆಂಡಿ ಅರ್ಜೆಂಟೀನದ ದೈತ್ಯ ತಂಡ ರಿವರ್ ಪ್ಲೇಟ್ಗೆ ಸೇರ್ಪಡೆಯಾಗಿದ್ದರು. ಯುರೋಪ್ನಲ್ಲಿ ಪೋರ್ಟೊ, ವಲೆನ್ಸಿಯಾ, ಮ್ಯಾಂಚೆಸ್ಟರ್ ಸಿಟಿ ಹಾಗೂ ಬೆನಿಫಿಕಾ ಫುಟ್ಬಾಲ್ ಕ್ಲಬ್ಗಳ ಪರವಾಗಿ ಆಡಿದ್ದರು.






