ಅರ್ಜುನ್ ತೆಂಡುಲ್ಕರ್ ಎರಡನೇ ಕ್ರಿಸ್ ಗೇಲ್ ಆಗಲಿದ್ದಾರೆ: ಯೋಗರಾಜ್ ಸಿಂಗ್

ಅರ್ಜುನ್ ತೆಂಡುಲ್ಕರ್ , ಯೋಗರಾಜ್ ಸಿಂಗ್ | PC : X
ಹೊಸದಿಲ್ಲಿ : ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಕುರಿತಂತೆ ಭವಿಷ್ಯ ನುಡಿದಿದ್ದಾರೆ. ಬ್ಯಾಟಿಂಗ್ ನತ್ತ ಹೆಚ್ಚು ಗಮನ ನೀಡಿದರೆ ಮುಂದೊಂದು ದಿನ ಅರ್ಜುನ್ ಎರಡನೇ ಕ್ರಿಸ್ ಗೇಲ್ ಆಗಲಿದ್ದಾರೆ ಎಂದಿದ್ದಾರೆ.
ತನ್ನ ಬೌಲಿಂಗ್ ನತ್ತ ಕಡಿಮೆ ಗಮನ ಕೊಟ್ಟು ಬ್ಯಾಟಿಂಗ್ ನತ್ತ ಹೆಚ್ಚು ಗಮನ ಹರಿಸುವಂತೆ ಅರ್ಜುನ್ ಗೆ ನಾನು ಹೇಳಿದ್ದೇನೆ ಎಂದು ಕ್ರಿಕೆಟ್ ನೆಕ್ಟ್ಸ್ಗೆ ಯೋಗರಾಜ್ ತಿಳಿಸಿದರು.
25ರ ವಯಸ್ಸಿನ ಅರ್ಜುನ್ 2022ರಲ್ಲಿ ರಣಜಿ ಟ್ರೋಫಿ ಋತು ಆರಂಭವಾಗುವ ಮೊದಲು 12 ದಿನಗಳ ಕಾಲ ಯೋಗರಾಜ್ ಬಳಿ ತರಬೇತಿ ಪಡೆದಿದ್ದರು. ಗೋವಾ ಕ್ರಿಕೆಟ್ ತಂಡದ ಪರ ತನ್ನ ಚೊಚ್ಚಲ ರಣಜಿ ಪಂದ್ಯ ಆಡಿರುವ ಅರ್ಜುನ್ ಚೊಚ್ಚಲ ಶತಕ ಗಳಿಸಿದ್ದರು. ಸಚಿನ್ ತೆಂಡುಲ್ಕರ್ 1988ರಲ್ಲಿ ಮೊದಲ ಶತಕ ಗಳಿಸಿದ್ದರು.
‘‘ಸಚಿನ್ ಪುತ್ರ ನನ್ನ ಬಳಿ 12 ದಿನ ತರಬೇತಿ ಪಡೆದಿದ್ದರು. ಬಳಿಕ ಶತಕವನ್ನು ಗಳಿಸಿದ್ದರು. ಶತಕ ಗಳಿಸಿದ ನಂತರ ಅವರು ಐಪಿಎಲ್ ಗೆ ಆಯ್ಕೆಯಾದರು. ನನ್ನ ಹೆಸರು ಅರ್ಜುನ್ ಪುತ್ರನ ಹೆಸರಿನೊಂದಿಗೆ ಸೇರಿಕೊಳ್ಳಬಹುದು ಎಂದು ಕೆಲವರು ಭಯಪಟ್ಟಿದ್ದರು. ನನ್ನ ಬಳಿ ಒಂದು ವರ್ಷ ಕಾಲ ಅರ್ಜುನ್ ರನ್ನು ಬಿಡಲು ಸಚಿನ್ ಗೆ ಹೇಳು. ಆನಂತರ ಏನಾಗುತ್ತದೆ ಎಂದು ನೋಡು ಎಂದು ಯುವರಾಜ್ ಗೆ ನಾನು ಹೇಳಿದ್ದೆ’’ ಎನ್ನುವುದಾಗಿ ಯೋಗರಾಜ್ ಸಿಂಗ್ ಹೇಳಿದರು.





