ಇಮ್ರಾನ್ ಖಾನ್, ಶೇನ್ ವಾರ್ನ್ ಅವರಿದ್ದ ವಿಶೇಷ ಕ್ಲಬ್ ಗೆ ಆಕಾಶ್ ದೀಪ್ ಸೇರ್ಪಡೆ

ಆಕಾಶ್ ದೀಪ್ | PC : PTI
ಲಂಡನ್, ಆ.2: ಭಾರತದ ನೈಟ್ ವಾಚ್ಮ್ಯಾನ್ ಆಗಿ ಬ್ಯಾಟಿಂಗ್ ಗೆ ಇಳಿದ ಆಕಾಶ್ ದೀಪ್ ತನ್ನ ಚೊಚ್ಚಲ ಟೆಸ್ಟ್ ಅರ್ಧ ಶತಕ ಗಳಿಸಿದ್ದಲ್ಲದೆ ಯಶಸ್ವಿ ಜೈಸ್ವಾಲ್ರೊಂದಿಗೆ ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ 10 ವಿಕೆಟ್ ಗೊಂಚಲು ಹಾಗೂ ಅರ್ಧಶತಕವನ್ನು ಗಳಿಸಿದ 12ನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಮೂಲಕ ಕ್ರಿಕೆಟ್ ಲೆಜೆಂಡ್ಗಳಾದ ಹ್ಯೂಗ್ ಟ್ರಂಬಲ್, ಶೇನ್ ವಾರ್ನ್, ಇಮ್ರಾನ್ ಖಾನ್, ಕೆಥ್ ಮಿಲ್ಲರ್ ಹಾಗೂ ರಿಚರ್ಡ್ ಹಾಡ್ಲೀ ಅವರನ್ನೊಳಗೊಂಡ ವಿಶೇಷ ಕ್ಲಬ್ಗೆ ಸೇರ್ಪಡೆಯಾದರು.
ಪ್ರಸಕ್ತ ಟೆಸ್ಟ್ಗಿಂತ ಮೊದಲು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕೇವಲ 11.48 ಬ್ಯಾಟಿಂಗ್ ಸರಾಸರಿ ಹೊಂದಿದ್ದ ಆಕಾಶ ದೀಪ್ ಈ ಸಾಧನೆ ಅತ್ಯಂತ ಮಹತ್ವದ್ದಾಗಿದೆ.
ಈ ಶತಮಾನದಲ್ಲಿ ಇಂಗ್ಲೆಂಡ್ ನೆಲದಲ್ಲಿ 4ನೇ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಭಾರತದ 4ನೇ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಹಾಗೂ ಶುಭಮನ್ ಗಿಲ್ ಈ ಸಾಧನೆ ಮಾಡಿದ್ದಾರೆ.
ಆಕಾಶ್ ಎಜ್ಬಾಸ್ಟನ್ ನಲ್ಲಿ ಟೆಸ್ಟ್ ಪಂದ್ಯದಲ್ಲಿ 187 ರನ್ಗೆ 10 ವಿಕೆಟ್ಗಳನ್ನು ಉರುಳಿಸಿ ಭಾರತವು 336 ರನ್ ಅಂತರದಿಂದ ಜಯಶಾಲಿಯಾಗುವಲ್ಲಿ ನೆರವಾಗಿದ್ದರು.







