ಟೆಸ್ಟ್ ಸರಣಿಯ ತಯಾರಿಗಾಗಿ ಭಾರತ ತಂಡದಲ್ಲೇ ಉಳಿಯಲಿರುವ ಅರ್ಷದೀಪ್, ಗುರ್ನೂರ್

Photo Credit: X
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ತ್ರಿವಳಿ ವೇಗಿಗಳಾದ ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್ ಹಾಗೂ ಆಕಿಬ್ ನಬಿ ಅವರು ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ತಯಾರಿಗಾಗಿ ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ದೃಢಪಡಿಸಿದ್ದಾರೆ.
ಏಕದಿನ ಸರಣಿಯ ನಂತರ ಈ ಮೂವರು ವೇಗಿಗಳು ನ್ಯೂಝಿಲ್ಯಾಂಡ್ನಲ್ಲಿ ಉಳಿದುಕೊಳ್ಳಲಿದ್ದಾರೆ. ಭಾರತ ತಂಡವು ತನ್ನ ಟೆಸ್ಟ್ ಕ್ರಿಕೆಟ್ ತಯಾರಿಯನ್ನು ಆರಂಭಿಸಲಿದೆ.
ಮೂರನೇ ಏಕದಿನ ಪಂದ್ಯಕ್ಕಿಂತ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಕ್,‘‘ಈಗ ನಡೆಯುತ್ತಿರುವ ಏಕದಿನ ಸರಣಿಯ ವಾತಾವರಣವು ಟೆಸ್ಟ್ ಪಂದ್ಯಗಳಿಗೆ ಅದರಲ್ಲೂ ಮುಖ್ಯವಾಗಿ ಬೌಲಿಂಗ್ ಘಟಕಕ್ಕೆ ಉಪಯುಕ್ತ ಪೂರ್ವ ತಯಾರಿಯಾಗಿದೆ’’ ಎಂದರು.
‘‘ಎರಡೂ ಪಿಚ್ಗಳು ಸೀಮ್ ಹಾಗೂ ಸ್ವಿಂಗ್ ಆಗಿವೆ. ಚೆಂಡು ಬದಲಾಗುವ ಕಾರಣ ಟೆಸ್ಟ್ಗೆ ಉತ್ತಮ ತಯಾರಿಯಾಗಿದೆ. ಏಕದಿನ ಕ್ರಿಕೆಟ್ ಪರಿಸ್ಥಿತಿಯ ಕುರಿತು ಐಡಿಯಾವನ್ನು ನೀಡುತ್ತದೆ. ತಂಡದ ತಯಾರಿಗೆ ಇದು ಉತ್ತಮವಾಗಿದೆ’’ ಎಂದು ಕೋಟಕ್ ಹೇಳಿದ್ದಾರೆ.
‘‘ಭಾರತ ತಂಡದ ಟೆಸ್ಟ್ ಆಟಗಾರರು ನವೆಂಬರ್ 11ರಂದು ಪೂರ್ವ ತಯಾರಿ ಶಿಬಿರವನ್ನು ಆರಂಭಿಸಲಿದ್ದಾರೆ. ಆ ಐದರಿಂದ ಆರು ಸೆಶನ್ಗಳು ಟೆಸ್ಟ್ ಸರಣಿಯ ತಯಾರಿಗೆ ನೆರವಾಗಬಹುದು’’ ಎಂದು ಕೋಟಕ್ ಹೇಳಿದ್ದಾರೆ.
‘‘ಟೆಸ್ಟ್ ತಯಾರಿಗಾಗಿ ಗುರ್ನೂರ್, ಅರ್ಷದೀಪ್ ಹಾಗೂ ನಬಿ ಉಳಿದುಕೊಳ್ಳಲಿದ್ದಾರೆ. ಗಂಭೀರ್ ಏಕದಿನ ತಂಡದೊಂದಿಗೆ ಇರಲಿದ್ದಾರೆ. ನಾನು ಹಾಗೂ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ವೆಲ್ಲಿಂಗ್ಟನ್ಗೆ ಪ್ರಯಾಣಿಸಲಿದ್ದೇವೆ’’ ಎಂದು ಕೋಟಕ್ ಹೇಳಿದ್ದಾರೆ.






