ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಅರ್ಷದೀಪ್ ಸಿಂಗ್ ಗೆ ದಂಡ

Photo: ANI
ಹೊಸದಿಲ್ಲಿ: ಅಹ್ಮದಾಬಾದ್ ನಲ್ಲಿ ರವಿವಾರ ನಡೆದ ಐಸಿಸಿ ಪುರುಷರ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನೀತಿ ಸಂಹಿತೆಯ ಲೆವೆಲ್-1ನ್ನು ಉಲ್ಲಂಘಿಸಿರುವ ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಗೆ ಪಂದ್ಯದ ಶುಲ್ಕದಲ್ಲಿ ಶೇ.15ರಷ್ಟು ದಂಡ ವಿಧಿಸಲಾಗಿದೆ.
ಅಂತರ್ರಾಷ್ಟ್ರೀಯ ಪಂದ್ಯದ ವೇಳೆ ಆಟಗಾರನ ಸನಿಹಕ್ಕೆ ಚೆಂಡನ್ನು( ಅಥವಾ ಇತರ ಯಾವುದೆ ಕ್ರಿಕೆಟ್ ಸಲಕರಣೆಯನ್ನು)ಅಸಮರ್ಪಕವಾಗಿ ಅಥವಾ ಅಪಾಯಕಾರಿ ರೀತಿಯಲ್ಲಿ ಎಸೆದಿರುವುದಕ್ಕೆ ಸಂಬಂಧಿಸಿದ ಆಟಗಾರರ ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.9 ಅನ್ನು ಅರ್ಷದೀಪ್ ಸಿಂಗ್ ಉಲ್ಲಂಘಿಸಿರುವುದು ಕಂಡುಬಂದಿದೆ.
ಅರ್ಷದೀಪ್ ಗೆ ದಂಡ ವಿಧಿಸಿದ್ದಲ್ಲದೆ, ಅವರ ಅಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿನ ಮೊದಲ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.
ನ್ಯೂಝಿಲ್ಯಾಂಡ್ ತಂಡದ ಇನಿಂಗ್ಸ್ ನ 11ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಅರ್ಷದೀಪ್ ಅವರು ಫೀಲ್ಡಿಂಗ್ ವೇಳೆ ಚೆಂಡನ್ನು ಸ್ಟ್ರೈಕ್ನಲ್ಲಿದ್ದ ಡ್ಯಾರಿಲ್ ಮಿಚೆಲ್ ಪ್ಯಾಡ್ಗೆ ಸಿಟ್ಟಿನಿಂದ ಜೋರಾಗಿ ಎಸೆದಿದ್ದರು.
ಅರ್ಷದೀಪ್ ಅವರು ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಪ್ರಸ್ತಾವಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದು, ಯಾವುದೇ ಅಧಿಕೃತ ವಿಚಾರಣೆ ಇರುವುದಿಲ್ಲ.







