US Open | ಪೆಗುಲಾರನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಅರಿನಾ ಸಬಲೆಂಕಾ

Photo Credit : PTI
ಕ್ರಿಸ್ ಎವರ್ಟ್ ಮತ್ತು ಸೆರೆನಾ ವಿಲಿಯಮ್ಸ್ ಅವರಂತೆ ಸತತ ಮೂರು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದ ಮಹಿಳಾ ಆಟಗಾರ್ತಿಯರ ಸಾಲಿಗೆ ಸೇರಲು ಬಯಸುತ್ತಿರುವ 28 ವರ್ಷದ ಬೆಲಾರಸ್ನ ಸಬಲೆಂಕಾ, ತಮ್ಮ ಪ್ರಬಲ ಸರ್ವಿಂಗ್ ಗೇಮ್ ಮತ್ತು ಶಕ್ತಿಶಾಲಿ ಗ್ರೌಂಡ್ಸ್ಟ್ರೋಕ್ ಗಳ ಮೂಲಕ ಪೆಗುಲಾ ಅವರನ್ನು ಸುಗಮವಾಗಿ ಪರಾಭವಗೊಳಿಸಿದ್ದಾರೆ.
ಅಗ್ರಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ತಮ್ಮ ಮೂರನೇ ಯುಎಸ್ ಓಪನ್ ಪ್ರಶಸ್ತಿಯತ್ತ ಪಯಣ ಮುಂದುವರಿಸಿದ್ದಾರೆ. ಶನಿವಾರ ನಡೆಯಲಿರುವ ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಅವರು ಗುರುವಾರ ನಡೆದ ಪಂದ್ಯದಲ್ಲಿ ಅಮೆರಿಕದ ಮೂರನೇ ಶ್ರೇಯಾಂಕದ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರನ್ನು ನೇರ ಸೆಟ್ ಗಳಲ್ಲಿ ಸೋಲಿಸಿದ್ದಾರೆ.
ಆರ್ಥರ್ ಆಶೆ ಸ್ಟೇಡಿಯಂ ಅಂಗಣದಲ್ಲಿ ನಡೆದ ಪಂದ್ಯದಲ್ಲಿ 7–5, 6–2ರ ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಯುಎಸ್ ಓಪನ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಪೆಗುಲಾ ಅವರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಕನಸನ್ನು ಭಗ್ನಗೊಳಿಸುವ ಮೂಲಕ ಪಂದ್ಯಾವಳಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಸಬಲೆಂಕಾ ಅಪಾರ ಆತ್ಮವಿಶ್ವಾಸದೊಂದಿಗೆ ಫೈನಲ್ ಗೆ ಪ್ರವೇಶಿಸಲಿದ್ದಾರೆ.
ಪಂದ್ಯದಲ್ಲಿ ಏಳು ‘ಏಸ್’ಗಳನ್ನು ಹಾಕಿರುವ ಸಬಲೆಂಕಾ 29 ‘ವಿನ್ನರ್’ಗಳನ್ನು ಗಳಿಸಿದ್ದರು. ಉಭಯ ಆಟಗಾರ್ತಿಯರು ಮೊದಲ ಸೆಟ್ನಲ್ಲಿ ಬಿಗಿ ಪೈಪೋಟಿ ನೀಡಿದರು. 12ನೇ ಗೇಮ್ ವರೆಗೆ (ಸಬಲೆಂಕಾ 6–5 ಮುನ್ನಡೆಯಲ್ಲಿದ್ದಾಗ) ಇಬ್ಬರೂ ಅತ್ಯುತ್ತಮ ಸರ್ವಿಸ್ ಮೂಲಕ ತಮ್ಮ ಸರ್ವ್ಗಳನ್ನು ಉಳಿಸಿಕೊಂಡಿದ್ದರು. “ಇಂತಹ ಆಟ ಆಡಲು ಸಾಧ್ಯವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ಗೆಲುವಿನ ಮಹದಾಸೆಯನ್ನು ಕಟ್ಟಿಕೊಂಡು ಬಂದಿದ್ದೆ” ಎಂದು ಸಬಲೆಂಕಾ ಹೇಳಿದ್ದಾರೆ.
28 ವರ್ಷದ ಬೆಲಾರಸ್ ಆಟಗಾರ್ತಿ ಸಬಲೆಂಕಾ ಅಂತಿಮ ಪಂದ್ಯವನ್ನು ಗೆದ್ದಲ್ಲಿ ಕ್ರಿಸ್ ಎವರ್ಟ್ ಮತ್ತು ಸೆರೆನಾ ವಿಲಿಯಮ್ಸ್ ಅವರಂತೆ ಸತತ ಮೂರು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದ ಮಹಿಳೆಯರ ಸಾಲಿಗೆ ಸೇರಲಿದ್ದಾರೆ.
ಸಬಲೆಂಕಾ ಅವರು ತಮ್ಮ ಪ್ರಬಲ ಸರ್ವಿಸ್ ಮತ್ತು ಶಕ್ತಿಯುತ ಗ್ರೌಂಡ್ಸ್ಟ್ರೋಕ್ ಗಳ ಮೂಲಕ ಪೆಗುಲಾ ಅವರನ್ನು ಸುಗಮವಾಗಿ ಸೋಲಿಸಿದ್ದಾರೆ.
ಫೈನಲ್ನಲ್ಲಿ ಸಬಲೆಂಕಾ ಅವರಿಗೆ ಎರಡನೇ ಶ್ರೇಯಾಂಕದ ಎಲೆನಾ ರೈಬಕಿನಾ ಎದುರಾಳಿಯಾಗಿದ್ದಾರೆ. ನಾಲ್ಕನೇ ಶ್ರೇಯಾಂಕದ ಕೋಕೋ ಗಾಫ್ ಅವರನ್ನು 3–6, 6–4, 6–4ರಿಂದ ಸೋಲಿಸಿದ ರೈಬಕಿನಾ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಕೋಕೋ ಗಾಫ್ 2023ರ ಯುಎಸ್ ಓಪನ್ ಫೈನಲ್ ನಲ್ಲಿ ಸಬಲೆಂಕಾ ಅವರನ್ನು ಸೋಲಿಸಿದ್ದರು.






