ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅಷರ್ದ್ ನದೀಮ್ಗೆ ಕಾಲಿನ ಮೀನಖಂಡದ ಶಸ್ತ್ರಚಿಕಿತ್ಸೆ

ಅಷರ್ದ್ ನದೀಮ್ | PC : olympics.com
ಹೊಸದಿಲ್ಲಿ: ಮುಂಬರುವ ಡೈಮಂಡ್ ಲೀಗ್ನಲ್ಲಿ ಒಲಿಂಪಿಕ್ಸ್ ಪದಕ ವಿಜೇತರಾದ ನೀರಜ್ ಚೋಪ್ರಾ ಮತ್ತು ಅಷರ್ದ್ ನದೀಮ್ರ ನಡುವಿನ ಭಾರೀ ನಿರೀಕ್ಷೆಯ ಪೈಪೋಟಿ ನಡೆಯುವ ಸಾಧ್ಯತೆಯಿಲ್ಲ. ಕಾಲಿನ ಮೀನಖಂಡದ ನೋವಿನಿಂದ ಬಳಲುತ್ತಿದ್ದ ನದೀಮ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಪೋಲ್ಯಾಂಡ್ನ ಸಿಲೇಸ್ಯದಲ್ಲಿ ಆಗಸ್ಟ್ 16ರಂದು ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ಜಾವೆಲಿನ್ ತಾರೆಗಳು ಸ್ಪರ್ಧಿಸಲು ನಿಗದಿಯಾಗಿತ್ತು. 2024ರ ಒಲಿಂಪಿಕ್ಸ್ ಫೈನಲ್ ಬಳಿಕ ಅವರಿಬ್ಬರು ಮುಖಾಮುಖಿಯಾಗಲಿರುವುದು ಇದೇ ಮೊದಲ ಬಾರಿಯಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನದೀಮ್ ಚಿನ್ನ ಗೆದ್ದರೆ, ಚೋಪ್ರಾ ಬೆಳ್ಳಿ ಪಡೆದಿದ್ದಾರೆ.
ಅವರು ಮುಂದಿನ ತಿಂಗಳು ಸ್ವಿಟ್ಸರ್ ಲ್ಯಾಂಡ್ನಲ್ಲೂ ಮುಖಾಮುಖಿಯಾಗುವ ನಿರೀಕ್ಷೆಯಿತ್ತು.
ಆದರೆ, ಈ ಎರಡೂ ಕೂಟಗಳಲ್ಲಿ ನದೀಮ್ ಪಾಲ್ಗೊಳ್ಳುವುದು ಅನಿಶ್ಚಿತವಾಗಿದೆ ಎಂದು ನದೀಮ್ರ ಕೋಚ್ ಸಲ್ಮಾನ್ ಭಟ್ ತಿಳಿಸಿದ್ದಾರೆ. ಸೆಪ್ಟಂಬರ್ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ಗೆ ಸಂಪೂರ್ಣ ದೈಹಿಕ ಕ್ಷಮತೆಯನ್ನು ಗಳಿಸುವುದು ನದೀಮ್ರ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
‘‘ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ಗೆ ಮುನ್ನ ಅವರಿಬ್ಬರು ಮುಖಾಮುಖಿಯಾಗುತ್ತಾರೆ ಎಂದು ನನಗನಿಸುವುದಿಲ್ಲ’’ ಎಂದು ಕೋಚ್ ನುಡಿದರು.
ಇಂಗ್ಲೆಂಡ್ನ ಕೇಂಬ್ರಿಜ್ನಲ್ಲಿ ಶಸ್ತ್ರಕ್ರಿಯೆ ನಡೆದಿದೆ. ನದೀಮ್ ಈಗ ಲಂಡನ್ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ







